ಮಂಗಳೂರು: ನಗರದ ಪಣಂಬೂರು ಬೀಚ್ ನ ರಿಕ್ಷಾ ಚಾಲಕರು ಬಾಡಿಗೆಯ ವಿಷಯದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಂಗಳೂರು ನಗರದ ರಿಕ್ಷಾ ಚಾಲಕ ಅರಫ್ ಎಂಬವರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಇಂದು ಪಣಂಬೂರು ಬೀಚ್ ಬಳಿ ನಡೆದಿದೆ.
ಅರಫ್ ಎಂಬುವವರು ಎಂದಿನಂತೆ ಮಂಗಳೂರಿನಿಂದ ಪಣಂಬೂರು ಬೀಚ್ ಗೆ ಬಾಡಿಗೆ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಮತ್ತೆ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯಲು ರಿಕ್ಷಾ ಪಾರ್ಕ್ ಬಳಿ ಕಾಯುತ್ತಿದ್ದಾಗ ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು ಇಲ್ಲಿ ಬಂದು ಬಾಡಿಗೆ ಮಾಡುವಂತಿಲ್ಲ ಎಂದು ಮಾತಿನ ಚಕಮಕಿ ನಡೆದಾಗ ಏಕಾಏಕಿ ಚಾಕುವಿನಿಂದ ಅರಫ್ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ಪ್ರಕರಣ ಪಣಂಬೂರು ಠಾಣೆಯಲ್ಲಿ ದಾಖಲಾಗಿದ್ದು ಹಲ್ಲೆಗೆ ಒಳಗಾದವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ರಿಕ್ಷಾ ಚಾಲಕರ ಸಂಘದವರು ಜಿಲ್ಲಾ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದು ಸಹಸ್ರಾರು ರಿಕ್ಷಾ ಚಾಲಕರು ಸೇರಿದ್ದರು ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರಿಗೆ ನ್ಯಾಯ ಒದಗಿಸುವದಾಗಿ ತಿಳಿಸಿದ್ದಾರೆ.