Home ಕರಾವಳಿ ಪಣೋಲಿಬೈಲು ಕೋಲಸೇವೆ 25ವರ್ಷಕ್ಕೆ ಬುಕ್ಕಿಂಗ್- ನಿತ್ಯವೂ ನಾಲ್ಕರ ಬದಲು 8ಕೋಲಗಳಿಗೆ ಅವಕಾಶ

ಪಣೋಲಿಬೈಲು ಕೋಲಸೇವೆ 25ವರ್ಷಕ್ಕೆ ಬುಕ್ಕಿಂಗ್- ನಿತ್ಯವೂ ನಾಲ್ಕರ ಬದಲು 8ಕೋಲಗಳಿಗೆ ಅವಕಾಶ

0

ಮಂಗಳೂರು: ನಗರದ ಪ್ರಸಿದ್ಧ ಕಲ್ಲುರ್ಟಿ ಕ್ಷೇತ್ರ ಪಣೋಲಿಬೈಲು ದೈವಸ್ಥಾನದಲ್ಲಿ ಭಕ್ತರು ನೀಡುವ ಕೋಲಸೇವೆಯ ಬುಕ್ಕಿಂಗ್ ಹೆಚ್ಚಾಗಿದ್ದು, ಆದ್ದರಿಂದ ಕೋಲ ಸೇವೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಸದ್ಯ ಪಣೋಲಿಬೈಲ್ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್‌ ಆಗಿದೆ. ಭಕ್ತರಿಗೆ ಶೀಘ್ರ ಸೇವೆ ಸಂದಾಯದ ಅವಕಾಶದ ಹಿನ್ನೆಲೆಯಲ್ಲಿ ಪ್ರತೀದಿನ ನಡೆಯುತ್ತಿದ್ದ ಕೋಲದಲ್ಲಿ ಬದಲಾವಣೆ ಮಾಡಲಾಗಿದೆ. ಈವರೆಗೆ ಪ್ರತೀದಿನ 4 ಮಂದಿಗೆ ಕೋಲ ಸೇವೆ ಮಾಡಲಾಗುತ್ತಿತ್ತು. ಇದೀಗ ಅದನ್ನು 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಲಾಗಿದೆ. ಮೇ 3ರಿಂದಲೇ ಈ ಅವಕಾಶ ನೀಡಲಾಗಿದೆ. ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನಗಳಲ್ಲಿ ಕೋಲ ಸೇವೆ ಸಂದಾಯವಾಗುತ್ತದೆ. ಬೆಳಗ್ಗೆ ನಿಗದಿತ ಸಮಯದೊಳಗೆ ಬಂದವರಿಗೆ ಎಷ್ಟು ಬೇಕಾದರೂ ಅಗೇಲು ಸೇವೆ ನೀಡುವುದಕ್ಕೆ ಅವಕಾಶವಿದೆ. ಆದರೆ ಈ ಹಿಂದೆ ದಿನವೊಂದಕ್ಕೆ ಕೋಲ ಸೇವೆ ನೀಡಲು ಬರೀ ನಾಲ್ವರಿಗೆ ಮಾತ್ರ ಅವಕಾಶವಿತ್ತು. ಆದರೆ ಕೋಲ ಸೇವೆಗಳ ಬುಕ್ಕಿಂಗ್‌ ಹೆಚ್ಚಿದ್ದು, ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 25 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದ್ದರೂ ತುಳುವಿನ ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜೀಪ ಮಾಗಣೆಯ ಜಾತ್ರೆ, ಉತ್ಸವ ಮೊದಲಾದ ಸಂದರ್ಭ ಕೋಲ ಸೇವೆ ನಡೆಯುವುದಿಲ್ಲ. ಆದ್ದರಿಂದ ವರ್ಷಕ್ಕೆ 600-700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಆದ್ದರಿಂದ ಈ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಕೋಲ ಸೇವೆ ನೀಡಲು ಬುಕ್ಕಿಂಗ್‌ ಮಾಡಿದವರಿಗೆ ಶೀಘ್ರ ಅವಕಾಶ ಸಿಗಲಿದೆ ಎಂದು ಪಣೋಲಿಬೈಲು ಕ್ಷೇತ್ರದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here