ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯದ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೆ ಅತೀ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲಾಲ ಮತದಾರರು ನಿರ್ಣಯಕ ಸ್ಥಾನದಲ್ಲಿದ್ದರೂ ಇತ್ತೀಚಿನ ಕೆಲವು ದಿನಗಳಿಂದ ಚುನಾವಣೆಯ ಈ ಹೊತ್ತಿನಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಕುಲಾಲ ಸಮುದಾಯದ ಮತದಾರರ ಅಂಕಿ ಅಂಶಗಳನ್ನು ಹಾಕದೆ, ಇತರ ಎಲ್ಲಾ ಹಿಂದುಳಿದ ವರ್ಗದ ಒಟ್ಟು ಸಂಖ್ಯೆ ಕೇವಲ ೪೦ ಸಾವಿರ ಮಾತ್ರ ಇರುವುದಾಗಿ ತೋರಿಸಿ ಪ್ರಚಾರ ಪಡಿಸುತ್ತಿರುವುದು ಖಂಡನೀಯ ಎಂದು ಬಂಟ್ವಾಳ ತಾಲೂಕು ಕುಲಾಲ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎಂಟು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಅಂದಾಜು ಸುಮಾರು 39 ಸಾವಿರ ಕುಲಾಲ ಮತದಾರರಿದ್ದಾರೆ. ಅದೇ ರೀತಿ ಮೂಡಬಿದಿರೆಯಲ್ಲಿ ಅಂದಾಜು 26 ಸಾವಿರ, ಬೆಳ್ತಂಗಡಿಯಲ್ಲಿ ಅಂದಾಜು 22 ಸಾವಿರ, ಪುತ್ತೂರಿನಲ್ಲಿ ಅಂದಾಜು 19 ಸಾವಿರ, ಸುಳ್ಯದಲ್ಲಿ ಅಂದಾಜು 16 ಸಾವಿರ, ಉಳ್ಳಾಲದಲ್ಲಿ ಅಂದಾಜು 26 ಸಾವಿರ, ಮಂಗಳೂರು ಉತ್ತರದಲ್ಲಿ ಅಂದಾಜು 19 ಸಾವಿರ, ಮಂಗಳೂರು ದಕ್ಷಿಣದಲ್ಲಿ ಅಂದಾಜು 17 ಸಾವಿರ ಹೀಗೆ ಒಟ್ಟು ಅಂದಾಜು 1,84,000ಮತದಾರರಿರುವುದಾಗಿದೆ.
ಸಾಮಾಜಿಕ ಜಾಲಾತಾಣಗಳಲ್ಲಿ ಆಧಾರ ರಹಿತವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಮುದಾಯದ ಸಂಖ್ಯೆಯನ್ನು ತೋರಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಕುಲಾಲ ಯಾನೆ ಮೂಲ್ಯ ಸಮುದಾಯದ ಮುಖಂಡರು ತಮ್ಮ ಸಮುದಾಯದ ಜನಸಂಖ್ಯೆಯನ್ನು ದಾಖಲೆಗಳ ಸಹಿತ ವಿವರಿಸಲು ಇದೀಗ ಸನ್ನಧರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಆದುದರಿಂದ ಕುಲಾಲ ಯಾನೆ ಮೂಲ್ಯ ಸಮುದಾಯದ ಜನಸಂಖ್ಯೆಯನ್ನು ವಿವರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಧಾರ ರಹಿತವಾಗಿ ಸಮಾಜದ ಮುಖಂಡರ ಗಮನಕ್ಕೆ ತಾರದೇ ಸಾಮಾಜಿಕ ಜಾಲಾತಾಣಗಳಲ್ಲಿ ಬಿತ್ತರಿಸುವುದನ್ನು ಕುಲಾಲ ಸಮಾಜ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ನಾರಾಯಣಸಿ. ಪೆರ್ನೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ರಮೇಶ್ ಎಂ. ಪಣೋಲಿಬೈಲು, ಜಯಗಣೇಶ್ ಉಪಸ್ಥಿತರಿದ್ದರು.