ಬೆಂಗಳೂರು: ಕಳೆದ ಮಾರ್ಚ್ ತಿಂಗಳಿನಲ್ಲಿ ಬೆಚ್ಚಿ ಬೀಳಿಸಿದ್ದ ನವ ವಿವಾಹಿತ ಸುದೀಪ್ ರೈ ನೆಲ್ಯಾಡಿ ಎಂಬ ಯುವಕನ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.


ಸುದೀಪ್ ರೈ ಆತ್ಮಹತ್ಯೆ ಗೆ ಮುಖ್ಯವಾಗಿ ಆತನನ್ನು ಬಲವಂತವಾಗಿ ಮನೆಯವರಿಗೆ ತಿಳಿಸದೆ ರಿಜಿಸ್ಟರ್ ಮದುವೆಯಾಗಿದ್ದ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ ಯಾನೆ ಅಪ್ಪು ಶೆಟ್ಟಿ ನೀಡಿರುವ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಸುದೀಪನ ಪೋಷಕರು ಹಾಗೂ ಗೆಳೆಯರು ಆರೋಪಿಸಿದ್ದರು.

ಇದರ ಬಗ್ಗೆ ಸುದೀಪ್ ರೈ ಅವರ ತಂದೆ ಬಿ.ದಾಮೋದರ ನೆಲ್ಯಾಡಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ
ಉಡುಪಿ ಜಿಲ್ಲೆಯ ಖಡಕ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರ ಆದೇಶದ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆಯ ಪೊಲೀಸರು ಸೌಮ್ಯ ಶೆಟ್ಟಿಯನ್ನು ಪತ್ತೆ ಹಚ್ಚಿ ಏಪ್ರಿಲ್ 11 ರಂದು ಉಡುಪಿಯಲ್ಲಿ ಆಕೆಯನ್ನು ಬಂಧಿಸಿದ್ದರು.

ನಂತರ ಸೌಮ್ಯ ಶೆಟ್ಟಿಯು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏಪ್ರಿಲ್ 30 ರಂದು ಉಡುಪಿ ಜಿಲ್ಲಾ ನ್ಯಾಯಾಲಯ ತಿರಸ್ಕೃತಗೊಳಿಸಿತ್ತು. ಇದೀಗ ಇಂದು ರಾಜ್ಯ ಉಚ್ಚ ನ್ಯಾಯಾಲಯ ಕೂಡ ಸೌಮ್ಯ ಶೆಟ್ಟಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದ್ದು ಪ್ರಕರಣದಲ್ಲಿ ಆರೋಪಿತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಈ ಪ್ರಕರಣದಲ್ಲಿ ಸೌಮ್ಯ ಶೆಟ್ಟಿಯ ವಿರುದ್ಧ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆಯಾಗಿದ್ದು ಆಕೆಯ ವಿರುದ್ಧ ಹಲವಾರು ಸಾಕ್ಷಿಗಳು ಹಾಗೂ ದಾಖಲೆಗಳು ದೊರೆತಿವೆ ಎಂಬ ಮಾಹಿತಿಯಿದೆ. ಇಲ್ಲಿ ಸೌಮ್ಯ ಶೆಟ್ಟಿಯ ಮೇಲೆ ಹಲವಾರು ಅನುಮಾನಗಳು ಮೂಡಿದ್ದು ಆಕೆ ಸುದೀಪ್ ಹಾಗೂ ಆತನ ಮನೆಯವರಲ್ಲಿ ಆಕೆಯ ಹಿಂದಿನ ವಿವಾಹಗಳ ವಿಷಯವನ್ನು ಮುಚ್ಚಿಟ್ಟಿದು ಆಕೆಗೆ ಒಟ್ಟು ಎರಡೆರಡು ವಿವಾಹವಾಗಿದ್ದು ಸುದೀಪನನ್ನು ನೋಂದಾವಣಿ ಕಚೇರಿಯಲ್ಲಿ ವಿವಾಹವಾಗುವಾಗ ಅವಿವಾಹಿತೆ ( unmarried ) ಎಂದು ಸುಳ್ಳು ದಾಖಲೆಗಳನ್ನು ನೀಡಿ ರಿಜಿಸ್ಟರ್ ಮದುವೆಯಾಗಿದ್ದಾಳೆ.
ಅದಲ್ಲದೆ ಮೊದಲು ಫೆಬ್ರವರಿ 6 ರಂದು ಬೆಳ್ತಂಗಡಿ ತಾಲೂಕಿನ ಕುತ್ರೋಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿ ನೋಂದಾವಣಿ ಕಚೇರಿಗೆ ಅಲ್ಲಿಯ ದಾಖಲೆ ನೀಡಿದ್ದಾಳೆ. ನಂತರ ಪುನಃ ಆಕೆಯ ಊರು ಕಾರ್ಕಳದ ಕುಕ್ಕುಂದೂರು ಶೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 19 ರಂದು ವಿವಾಹವಾಗಿದ್ದು ಅಂದು ಸುದೀಪನಿಗೆ ಅದಾಗಲೇ ವಿಷ ಪ್ರಾಶನವಾಗಿದ್ದು ಆತನು ತೀವ್ರ ಅಸ್ವಸ್ಥನಾಗಿದ್ದ ಎಂದು ದೇವಳದ ಸಿಬ್ಬಂದಿಗಳು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಇದನ್ನೆಲ್ಲಾ ನೋಡುವಾಗ ಸೌಮ್ಯ ಶೆಟ್ಟಿ ಪೂರ್ವ ನಿಯೋಜಿತವಾಗಿ ಸುದೀಪನ ಮನೆಯವರ ಆಸ್ತಿಯನ್ನು ಕಬಳಿಸಲು ದಾಖಲೆಗಳನ್ನು ಸೃಷ್ಟಿ ಮಾಡಿರುವುದಾಗಿ ಮೇಲ್ನೋಟದಲ್ಲಿ ಕಂಡು ಬರುತ್ತಿದೆ.
ಈಗ ರಾಜ್ಯ ಉಚ್ಛ ನ್ಯಾಯಾಲಯ ಕೂಡ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಜಾಮೀನನ್ನು ತಿರಸ್ಕೃತಗೊಳಿಸಿದ್ದು ಆಕೆಗೆ ಜೈಲೂಟ ಮುಂದುವರೆದಿದೆ. ದಿವಂಗತ. ಸುದೀಪನ ಪರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಚಿದಾನಂದ ಮಾಣಿ , ಬಂಟ್ವಾಳ ಹಾಗೂ ಹೆಚ್. ಎನ್ ಸಮೀರ್, ಬೆಂಗಳೂರು ವಾದಿಸಿದ್ದರು.



