ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ| ಬೃಜೇಶ್ ಚೌಟ ಎ. 4ರಂದು ಬೆಳಗ್ಗೆ 9ಕ್ಕೆ ಬಂಟ್ಸ್ ಹಾಸ್ಟೆಲ್ ಸಮೀಪದ ಚುನಾವಣ ಕಚೇರಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಬೃಹತ್ ರ್ಯಾಲಿಯೊಂದಿಗೆ ತೆರಳಿ 11 ಗಂಟೆಗೆ ನಾಮಪತ್ರ ಸಲ್ಲಿಸುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಕ್ಷದ ಎಲ್ಲ ಶಾಸಕರೂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಇರುವರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್, ರಾಜ್ಯ ಚುನಾವಣ ಸಂಚಾಲಕ ಸುನಿಲ್ ಕುಮಾರ್ ಪಾಲ್ಗೊಳ್ಳುವರು ಎಂದು ತಿಳಿದು ಬಂದಿದೆ.
ಎ. 5ರಂದು ಪ್ರಚಾರ ಸಭೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹಿತ ಹಿರಿಯ ರಾಷ್ಟ್ರೀಯ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದರಲ್ಲದೇ, ಮನೆ ಮನೆಗೆ ಕಾರ್ಯಕರ್ತರು ತೆರಳಿ ಪ್ರಚಾರಅಭಿಯಾನ ನಡೆಸುವರು.
ಎ. 21ರಂದು ನಡೆಯುವ ಮಹಾ ಸಂಪರ್ಕ ಅಭಿಯಾನದಲ್ಲಿ ಏಕಕಾಲದಲ್ಲಿ ಎಲ್ಲ ಮನೆಗಳನ್ನೂ ತಲುಪಲಾಗುವುದು ಎಂದರು.
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ದ.ಕ ದಲ್ಲಿ ಕಾಂಗ್ರೆಸ್ ಬೆಂಬಲಿಸುವ ಸತ್ಯಜಿತ್ ಸುರತ್ಕಲ್ ಅವರ ಹೇಳಿಕೆ ವೈಯಕ್ತಿಕ ಎಂದು ಸ್ಪಷ್ಟಪಡಿಸಿದ ಸತೀಶ್, ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪ್ರಶ್ನೆಯೊಂದಕ್ಕೆ ಬಿಜೆಪಿಯಲ್ಲೇ ಇರುವ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಸತ್ಯಜಿತ್ ಹಿಂದೂ ನಾಯಕರಾಗಿದ್ದವರು. ಜಾತಿ ಆಧಾರದಲ್ಲಿ ಕಾಂಗ್ರೆಸ್‌ಗೆ ಬೆಂಬಲಕೊಟ್ಟಿರುವ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡರಾದ ನಿತಿನ್ ಕುಮಾರ್, ಸಂಜಯ್ ಪ್ರಭು, ರವಿಶಂಕರ ಮಿಜಾರು, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.