ವಿಟ್ಲ: ಅಂಗಡಿಗಳಿಗೆ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ವಿಟ್ಲ ಪೇಟೆಯಲ್ಲಿ ಹಾಗೂ ವಿಟ್ಲದ ಮೇಗಿನ ಪೇಟೆಯಲ್ಲಿ ಶುಕ್ರವಾರ ನಡೆದಿದೆ.
ವಿಟ್ಲ ಪೇಟೆಯ 2 ಅಂಗಡಿಗಳಲ್ಲಿ ಹಾಗೂ ವಿಟ್ಲ ಮೇಗಿನ ಪೇಟೆಯ ಒಂದು ಅಂಗಡಿಯಲ್ಲಿ ಕಳ್ಳತನವಾಗಿದೆ. ಚುನಾವಣೆ ಹಿನ್ನಲೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆಗೊಳಿಸಲಾಗಿದ್ದು, ಅವರು ತಡ ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಳ್ಳರು ಸಲೀಸಾಗಿ ಕಳ್ಳತನ ಕೃತ್ಯ ಎಸಗಿರುವುದು ಹಾಗೂ ತಪ್ಪಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಟ್ಲ ಪೊಲೀಸ್ ಠಾಣೆಯ ಹಿಂಭಾಗ, ವಶ ಪಡಿಸಿಕೊಂಡ ವಾಹನಗಳನ್ನು ಸಂಗ್ರಹಿಸಿಡುವ ಸ್ಥಳವಿದೆ. ಆ ಸ್ಥಳಕ್ಕೆ ಹೋಗುವ ರಸ್ತೆಯಲ್ಲೇ ಮಹಮ್ಮದ್ ಹಾಜಿ ಮಾಲೀಕತ್ವದ ದಿನಸಿ ಅಂಗಡಿಯಿದ್ದು, ಆ ಅಂಗಡಿಗೆ ಕಳ್ಳರು ಕನ್ನ ಹಾಕಿದ್ದಾರೆ. ದಿನಸಿ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಹಾಗೂ ಮುಖ ಚಹರೆ ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಇಬ್ಬರು ಕಳ್ಳರು ಕೃತ್ಯ ಎಸಗಿರುವುದು ಕಂಡುಬಂದಿದೆ. ದಿನಸಿ ಅಂಗಡಿಯ ಹಿಂಭಾಗದಲ್ಲಿ ಛಾವಣಿಯ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕ್ಯಾಶ್ ಕೌಂಟರ್ ನಲ್ಲಿದ್ದ 8,೦೦೦ ರೂ. ಮತ್ತು ಕಟ್ಟಿಟ್ಟಿದ್ದ ದಿನಸಿ ಸಾಮಾಗ್ರಿಯನ್ನು ಹೊತ್ತೊಯ್ದಿದ್ದಾರೆ.
ಬಳಿಕ ಪಕ್ಕದ ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್. ಅವರಿಗೆ ಸೇರಿದ ಬೀಡಿ ಬ್ರ್ಯಾಂಚ್ ಹಿಂಬದಿ ಬಾಗಿಲು ಮುರಿದು, ಒಳ ನುಗ್ಗಿದ್ದ ಕಳ್ಳರು, ಸಂಪೂರ್ಣ ಜಾಲಾಡಿ ಅಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ. ನಂತರ ಮೇಗಿನ ಪೇಟೆಯಲ್ಲಿರುವ ಫೆಲಿಸ್ ಪಾಯಸ್ ಅವರಿಗೆ ಸೇರಿದ ಕೋಳಿಯ ಅಂಗಡಿಯ ಕಿಟಕಿ ಕಿತ್ತು ತೆಗೆದು ಒಳ ನುಗ್ಗಿದ ಕಳ್ಳರು, ಅಲ್ಲಿ ಕೂಡ ಒಂದಷ್ಟು ನಗದು ದೋಚಿದ್ದಾರೆ.