ರಾಜ್ಯದಲ್ಲಿರುವುದು “ಗ್ಯಾರಂಟಿ ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರ” :- ವೇದವ್ಯಾಸ ಕಾಮತ್

Prakhara News
1 Min Read

ಮಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆ ಪರಿಷ್ಕರಣೆ ಹೆಸರಲ್ಲಿ ಲಕ್ಷಾಂತರ ಜನರ ಗೃಹಜ್ಯೋತಿ, ಗೃಹಲಕ್ಷ್ಮಿ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗೆ ಕತ್ತರಿ ಹಾಕಿದೆ. ಆ ಅರ್ಹ ಫಲಾನುಭವಿಗಳಲ್ಲಿ ಗೊಂದಲ ಸೃಷ್ಟಿಸುವ ಮೂಲಕ ತಮ್ಮ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆರೋಪಿಸಿದರು.

ಬ್ಯಾಂಕ್ ಖಾತೆಯೇ ಇಲ್ಲದ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ಪಾವತಿಯಾಗಿರುವುದು, ಹಲವು ಒಂದೇ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು, ಮರಣ ಹೊಂದಿದವರಿಗೂ ಹಣ ಜಮೆಯಾಗಿರುವುದು, ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ. ಹಾಗಾಗಿಯೇ ಜನರ ಗಮನ ಬೇರೆಡೆ ಸೆಳೆಯಲು ಅರ್ಹ ಫಲಾನುಭವಿಗಳಿಗೂ ಕತ್ತರಿ ಹಾಕಿ ಗೊಂದಲ ಸೃಷ್ಟಿಸಲಾಗಿದೆ. ಅಷ್ಟಕ್ಕೂ ರಾಜ್ಯದ ಪ್ರತೀ ಜಿಲ್ಲೆ, ತಾಲೂಕಿನಲ್ಲಿ ಸರ್ಕಾರವೇ ನೂರಾರು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಜಾರಿಗೆ ತಂದ “ಗ್ಯಾರಂಟಿ ಅನುಷ್ಠಾನ ಸಮಿತಿ” ಏನು ಮಾಡುತ್ತಿದೆ? ಅವರಿಗೆ ರಾಜ್ಯದ ಜನರ ತೆರಿಗೆಯಿಂದ ವೇತನ, ಭತ್ಯೆ, ವಾಹನ ಹೀಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡಿದ್ದು ಯಾಕೆ? ಈ ಭ್ರಷ್ಟಾಚಾರದಲ್ಲಿ ಅವರಿಗೂ ಪಾಲು ಇದೆಯೇ? ಸರ್ಕಾರವೇ ಅವರ ರಕ್ಷಣೆಗೆ ನಿಂತಿದೆಯೇ? ಎಂದು ಶಾಸಕರು ಪ್ರಶ್ನಿಸಿದರು.

ಈ ಕೂಡಲೇ ರಾಜ್ಯಕ್ಕೆ ಹೊರೆಯಾಗಿರುವ ಗ್ಯಾರೆಂಟಿ ಅನುಷ್ಠಾನ ಸಮಿತಿಯನ್ನು ವಿಸರ್ಜಿಸಬೇಕು. ಯಾವುದೇ ಕಾರ್ಯ ನಿರ್ವಹಿಸದೇ ಕಾಲಹರಣ ಮಾಡಿದ ಅವರಿಂದ ಇದುವರೆಗೆ ಪಡೆದ ಸಂಬಳ ಮತ್ತು ಭತ್ಯೆಗಳನ್ನು ವಸೂಲಿ ಮಾಡಬೇಕು. ಬಡ ಮಹಿಳೆಯರ ಹೆಸರಿನಲ್ಲೂ ಬೃಹತ್ ಲೂಟಿಗೆ ಇಳಿದವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಆ ಮೂಲಕ ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಮಹಾ ಮೋಸಕ್ಕೆ ಇನ್ನೆರಡು ವರ್ಷಗಳಲ್ಲಿ ಜನರಿಂದಲೇ ಉತ್ತರ ದೊರೆಯಲಿದೆ ಎಂದರು.

Share This Article
Leave a Comment