ಕಟೀಲು: ಶ್ರೀ ಕ್ಷೇತ್ರ ಕಟೀಲು ದೇವಾಲಯದಲ್ಲಿ ನಡೆದ ತುಳುವರ್ಲ್ಡ್ ಫೌಂಡೇಶನ್‌ನ ಆಡಳಿತ ಮಂಡಳಿ ಸಭೆಯಲ್ಲಿ 2026–27ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಸಂತ ರೈ ಕುತ್ತೆತ್ತೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಜರ್ಮನಿಯ ಕೋಲೋನ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರವಾಸೋದ್ಯಮದಲ್ಲಿ ಡಿಪ್ಲೊಮಾ ಪಡೆದಿರುವ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರು ಸುಮಾರು 39 ವರ್ಷಗಳ ಕಾಲ ಜರ್ಮನಿಯಲ್ಲಿ ನೆಲೆಸಿ ತಮ್ಮದೇ ಆದ ಟ್ರಾವೆಲ್ ಏಜೆನ್ಸಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ವಿದೇಶದಲ್ಲಿದ್ದರೂ ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡಿರುವ ಅವರು “ಅಟಿಲು ಮಲ್ಪುಲೆ ತುಳು ಕಲ್ಪುಲೆ” ಯೂಟ್ಯೂಬ್ ವಾಹಿನಿಯ ಮೂಲಕ ತುಳುನಾಡಿನ ಪರಂಪರೆಯನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಇತ್ತೀಚೆಗೆ ಮುಲ್ಕಿಯಲ್ಲಿ “ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಅವರು ಶಾಂಭವಿ ಸಂಜೀವಿನಿ ಒಕ್ಕೂಟ, ಮುಲ್ಕಿ ತಾಲೂಕು ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್, ಮುಲ್ಕಿಯಲ್ಲಿ ಸಕ್ರಿಯ ಸಮಾಜಸೇವಕರಾಗಿದ್ದು, 2026–27ನೇ ಸಾಲಿಗೆ ರೋಟರಿ ಕ್ಲಬ್, ಮುಲ್ಕಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಅವರ ಮತ್ತೊಂದು ವಿಶೇಷ ಸಾಧನೆಯಾಗಿದೆ.
ವಸಂತ ರೈ ಕುತ್ತೆತ್ತೂರು ಅವರು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಲ್ಲಿ ಮುಖ್ಯ ಪರಚಾಲನ ಪ್ರಬಂಧಕರಾಗಿ (Chief Operations Manager) ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಡಳಿತ, ಯೋಜನಾ ನಿರ್ವಹಣೆ ಹಾಗೂ ಸಂಘಟನಾ ಕೌಶಲ್ಯದಲ್ಲಿ ಅಪಾರ ಅನುಭವ ಹೊಂದಿರುವ ಅವರು, ನಿವೃತ್ತಿಯ ಬಳಿಕ ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಇತ್ತೀಚೆಗೆ ತುಳುವರ್ಲ್ಡ್ ಫೌಂಡೇಶನ್ ಮುಖಾಂತರ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಪುನರುದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ನಿನ್ನಿಕಲ್ಲು ಪಾದೆಯನ್ನು ರಾಷ್ಟ್ರೀಯ ಮತ್ತು ಜಾಗತಿಕ ಪರಂಪರೆಯ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಮಹತ್ವದ ಕೊಡುಗೆ ನೀಡಿ ವಿಶೇಷ ಶ್ರಮ ವಹಿಸಿದ್ದಾರೆ.
ನೂತನ ಅಧ್ಯಕ್ಷೆ ಹಾಗೂ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ತುಳುವರ್ಲ್ಡ್ ಫೌಂಡೇಶನ್ ತನ್ನ ಧ್ಯೇಯವಾಕ್ಯವಾದ “ತುಳುವ ಜಗದ ವಿಶ್ವರೂಪ”ದೊಂದಿಗೆ ತುಳುನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ, ಕಳರಿ, ದೈವಾರಾಧನೆ, ಜನಪದ ಪರಂಪರೆ, ತುಳು ಡಿಜಿಟಲ್ ಗ್ರಂಥಾಲಯ, ತುಳುವ ಮಹಾಸಭೆಯ ಬಲವರ್ಧನೆ, ಸಂಶೋಧನೆ, ಪರಂಪರೆಯ ತಾಣಗಳ ಸಂರಕ್ಷಣೆ ಹಾಗೂ ಜಾಗತಿಕ ಮಟ್ಟದಲ್ಲಿ ತುಳು ಅಸ್ಮಿತೆಯ ಪ್ರಚಾರಕ್ಕಾಗಿ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದೆ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.


