ಮಂಗಳೂರು: ಮಂಗಳೂರು ವಕೀಲರ ಸಂಘವು ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷದ ಆಧಾರದ ಮೇಲೆ ನಡೆಯುವ ಸಂಘಟನೆಯಲ್ಲ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಹಾಗೂ ಎಲ್ಲಾ ಧರ್ಮಗಳ ವಕೀಲರು, ವಿವಿಧ ರಾಜಕೀಯ ಚಿಂತನೆಗಳನ್ನು ಹೊಂದಿರುವ ಸದಸ್ಯರು ಒಂದೇ ವೇದಿಕೆಯಲ್ಲಿ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಾರೆ. ನಮ್ಮನ್ನು ಒಗ್ಗೂಡಿಸುವುದು ನಮ್ಮ ಧರ್ಮ ಅಥವಾ ರಾಜಕೀಯವಲ್ಲ; ವಕೀಲ ವೃತ್ತಿಯೇ ನಮ್ಮ ಸಾಮಾನ್ಯ ಗುರುತು.


ವಕೀಲರು ತಮ್ಮ ಕಕ್ಷಿದಾರರ ಧರ್ಮ, ಜಾತಿ, ಭಾಷೆ ಅಥವಾ ರಾಜಕೀಯ ಹಿನ್ನೆಲೆಯನ್ನು ನೋಡಿ ವಕಾಲತ್ತು ನಡೆಸುವುದಿಲ್ಲ. ನ್ಯಾಯ, ಕಾನೂನು ಮತ್ತು ವೃತ್ತಿಧರ್ಮವನ್ನು ನಿಷ್ಠೆಯಿಂದ ಪಾಲಿಸುವುದೇ ನಮ್ಮ ಕರ್ತವ್ಯ. ಇದೇ ಮಂಗಳೂರು ವಕೀಲರ ಸಂಘದ ಸಂಪ್ರದಾಯ ಮತ್ತು ಹೆಮ್ಮೆ.

ವಕೀಲರ ಸಂಘದ ಚುನಾವಣೆ ಪ್ರಜಾಪ್ರಭುತ್ವದ ಪ್ರಕ್ರಿಯೆ. ಪ್ರತಿಯೊಬ್ಬ ಸದಸ್ಯನಿಗೂ ತನ್ನ ಇಚ್ಛೆಯ ಅಭ್ಯರ್ಥಿಯನ್ನು ಬೆಂಬಲಿಸುವ ಅಥವಾ ವಿರೋಧಿಸುವ ಹಕ್ಕಿದೆ. ಆದರೆ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ, ಆಯ್ಕೆಯಾದ ಅಧ್ಯಕ್ಷರು ಇಡೀ ವಕೀಲರ ಸಂಘದ ಅಧ್ಯಕ್ಷರಾಗುತ್ತಾರೆ. ಸಂಘದ ಗೌರವವನ್ನು ಕಾಪಾಡುವುದು, ಅದರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಸಂಘದ ಘನತೆಯನ್ನು ಉಳಿಸುವುದು ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ.

ಯಾರು ಯಾರನ್ನು ಚುನಾವಣೆಯಲ್ಲಿ ಬೆಂಬಲಿಸಿದರು ಎಂಬುದನ್ನು ಪ್ರಶ್ನಿಸುವ ನೈತಿಕ ಅಥವಾ ಕಾನೂನುಬದ್ಧ ಹಕ್ಕು ಯಾರಿಗೂ ಇಲ್ಲ. ಅದು ಪ್ರತಿಯೊಬ್ಬ ಸದಸ್ಯನ ವೈಯಕ್ತಿಕ ಮತ್ತು ಪ್ರಜಾಪ್ರಭುತ್ವದ ಹಕ್ಕು.
ಮಾನ್ಯರೇ, ನೀವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು–ಉಳ್ಳಾಲ ಕ್ಷೇತ್ರದ ಪ್ರಸ್ತುತ ಶಾಸಕರನ್ನು ಬೆಂಬಲಿಸಿ ಅವರ ಪರವಾಗಿ ಪ್ರಚಾರ ನಡೆಸಿದ್ದೀರಿ. ಇಂದು ಅದೇ ಶಾಸಕರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಒಂದು ರಾಜಕೀಯ ಪಕ್ಷದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ. ಸಂಜೆ “ಸಮಾನ ಮನಸ್ಕ” ಎಂಬ ಹೆಸರಿನಲ್ಲಿ ಪತ್ರಿಕಾಗೋಷ್ಠಿಯನ್ನೂ ನಡೆಸುತ್ತೀರಿ. ಆದ್ದರಿಂದ ಮೊದಲು ನಿಮ್ಮ ರಾಜಕೀಯ ಮತ್ತು ಸಾಮಾಜಿಕ ನಿಲುವು ಏನು ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸುವುದು ಸೂಕ್ತ.
ಮಂಗಳೂರು ವಕೀಲರ ಸಂಘದ ಇತಿಹಾಸದಲ್ಲಿ ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಚುನಾವಣೆ ನಡೆದಿಲ್ಲ. ಎಲ್ಲಾ ಧರ್ಮಗಳ ಸದಸ್ಯರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ನಮ್ಮ ಸಂಘದ ವೈಶಿಷ್ಟ್ಯ ಮತ್ತು ಸಂಪ್ರದಾಯ.
ಆದ್ದರಿಂದ, ಮಂಗಳೂರು ವಕೀಲರ ಸಂಘದ ಕುರಿತು ಯಾವುದೇ ಸಾರ್ವಜನಿಕ ಬರಹ ಅಥವಾ ಟೀಕೆ ಮಾಡುವ ಮೊದಲು, ಇದು ಜಾತಿ-ಧರ್ಮ ಅಥವಾ ರಾಜಕೀಯದ ವೇದಿಕೆಯಲ್ಲ; ಕಾನೂನು ವೃತ್ತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ವೃತ್ತಿಪರರ ಸಂಘ ಎಂಬ ಅರಿವು ಇರಲಿ.


