Home ಕರಾವಳಿ ಮಂಗಳೂರು: ತುಳು ಅಧಿಕೃತ ರಾಜ್ಯಭಾಷೆಗೆ 95% ಕೆಲಸ ಸಂಪೂರ್ಣ, 5% ಕೆಲಸವಷ್ಟೇ ಬಾಕಿ – ವೇದವ್ಯಾಸ...

ಮಂಗಳೂರು: ತುಳು ಅಧಿಕೃತ ರಾಜ್ಯಭಾಷೆಗೆ 95% ಕೆಲಸ ಸಂಪೂರ್ಣ, 5% ಕೆಲಸವಷ್ಟೇ ಬಾಕಿ – ವೇದವ್ಯಾಸ ಕಾಮತ್

0

ಮಂಗಳೂರು: ತುಳುಭಾಷೆಗೆ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ದೊರಕಬೇಕೆಂದು ನಗರದ ಉರ್ವಸ್ಟೋರ್ ನ ತುಳುಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಶಾಸಕ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಂಡರು. ಜೊತೆಗೆ ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಬೇಕು. ಆ ಬಳಿಕವೂ ಸರಕಾರದಿಂದ ವೇಗ ದೊರಕದಿದ್ದಲ್ಲಿ ಹೋರಾಟ, ಉಪವಾಸ ಸತ್ಯಾಗ್ರಹಕ್ಕೂ ಸನ್ನದ್ಧವಾಗಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬೇರೆ ರಾಜ್ಯಗಳು ಒಂದಕ್ಕಿಂತ ಅಧಿಕ ಭಾಷೆಗಳನ್ನು ಯಾವ ರೀತಿ ಅಧಿಕೃತ ಭಾಷೆಯನ್ನಾಗಿ ಮಾಡಿದರು ಎಂಬ ಸಂಪೂರ್ಣ ವರದಿಯನ್ನು ರಾಜ್ಯ ಸರಕಾರ ಈಗಾಗಲೇ ಪಡೆದಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕ್ಯಾಬಿನೆಟ್ ನಲ್ಲಿ ಆದೇಶಿಸಲು ಮಾತ್ರ ಬಾಕಿಯಿದೆ. 95% ಕೆಲಸಗಳು ಸಂಪೂರ್ಣಗೊಂಡಿದ್ದು, 5% ಕೆಲಸಗಳು ಮಾತ್ರ ಬಾಕಿಯಿದೆ. ಅದು ಕೂಡಾ ಆದಷ್ಟು ಶೀಘ್ರದಲ್ಲಿ ಆಗಬೇಕೆನ್ನುದು ನಮ್ಮ ಆಶಯ ಎಂದು ಹೇಳಿದರು. ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ತುಳುವಿಗೆ ಅಧಿಕೃತ ಸ್ಥಾನಮಾನ ಸಿಕ್ಕಿದ್ದಲ್ಲಿ ಹೊರಗಿನಿಂದ ಬಂದ ಕಂಪೆನಿಗಳಲ್ಲಿ ಸ್ಥಳೀಯ ಯುವಕರಿಗೆ ಕೆಲಸ ದೊರೆಯುತ್ತದೆ. ಉಡುಪಿ, ದ.ಕ.ಜಿಲ್ಲೆಯ ಸಂಸತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ತುಳು ಅಧಿಕೃತ ಭಾಷೆ ಮಾಡುವ ಬಗ್ಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಎಂದು ಹೇಳಿದರು.


LEAVE A REPLY

Please enter your comment!
Please enter your name here