ಕರ್ನಾಟಕ ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನಗಳಿಗೆ ಎಚ್ಎಸ್ಆರ್ಪಿ ಅಂದ್ರೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು, ಡೆಡ್ಲೈನ್ ನೀಡಿ ಆದೇಶ ಹೊರಡಿಸಲಾಗಿದೆ. 2024ರ ಫೆಬ್ರವರಿ 17 ರವರೆಗೆ ಡೆಡ್ಲೈನ್ ಫಿಕ್ಸ್ ಮಾಡಲಾಗಿದೆ. ಹೀಗಿದ್ದಾಗಲೇ ವಾಹನ ಮಾಲೀಕರಿಗೆ ನಂಬರ್ ಪ್ಲೇಟ್ ಬದಲಾಯಿಸುವ ವಿಚಾರದಲ್ಲಿ ಈಗ ಮತ್ತೊಂದು ಆಘಾತ ಎದುರಾಗಿದೆ! ಏನದು ಹೊಸ ಶಾಕ್? ಮುಂದೆ ಓದಿ
ಅಂದಹಾಗೆ ಕರ್ನಾಟಕದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿ ಆಗಿರುವ ವಾಹನ ಸಂಖ್ಯೆಯು 2 ಕೋಟಿಯಷ್ಟಿದೆ. ಆದರೆ ಇವರೆಲ್ಲಾ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆದು ಅಳವಡಿಸಿಕೊಳ್ಳಬೇಕು. ಗಡುವು ವಿಸ್ತರಿಸಿದರೂ ಈವರೆಗೆ ಬರೀ 12 ಲಕ್ಷ ವಾಹನಗಳಿಗೆ ಮಾತ್ರ, ಎಚ್ಎಸ್ಆರ್ಪಿ ಅಳವಡಿಕೆ ಮಾಡಲಾಗಿದೆ. ಇನ್ನು ಇದೀಗ ಬಾಕಿ 1.88 ಕೋಟಿ ವಾಹನಕ್ಕೆ, ಎಚ್ಎಸ್ಆರ್ಪಿ ಅಳವಡಿಸಬೇಕಿದೆ. ಈ ಹಿನ್ನೆಲೆ ಸಾರಿಗೆ ಇಲಾಖೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಜನರು ಮುಗಿಬಿದ್ದಿರುವ ಸಮಯದಲ್ಲೇ ಆಘಾತ ಎದುರಾಗಿದೆ.
ಏನ್ ಗುರೂ ಇದು ತಲೆನೋವು?
ಹೌದು ಹಳೆಯ ವಾಹನಕ್ಕೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆಗಾಗಿ ಕೋರಿಕೆ ಸಲ್ಲಿಸುವ ವೆಬ್ ಪೋರ್ಟಲ್ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಇದೇ ಕಾರಣಕ್ಕೆ ವಾಹನದ ಮಾಲೀಕರು ನೋಂದಣಿಗೆ ಸ್ಥಳೀಯ ಆರ್ಟಿಒ ಕಚೇರಿ & ವಾಹನ ಶೋರೂಂಗಳಿಗೆ ಅಲೆಯುವ ಸ್ಥಿತಿ ನಿರ್ಮಾಣ ಆಗಿದೆ. ಮೊದಲಿಗೆ ಎಚ್ಎಸ್ಆರ್ಪಿ ಅಳವಡಿಕೆಗೋಸ್ಕರ ಸರ್ಕಾರವು 2023ರ ನವೆಂಬರ್ 17ರ ತನಕ ಕಾಲಾವಕಾಶ ನೀಡಿತ್ತು. ಆದರೆ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗದ ಕಾರಣಕ್ಕೆ 2024ರ ಫೆಬ್ರವರಿ 17ರ ತನಕ ಡೆಡ್ಲೈನ್ ವಿಸ್ತರಣೆ ಮಾಡಲಾಗಿತ್ತು.
1 ಸಾವಿರ ರೂಪಾಯಿ ದಂಡ!
ಅಕಸ್ಮಾತ್ ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಪಕ್ಕಾ. ಫೆಬ್ರವರಿ 17ಕ್ಕೆ ಗಡುವು ಮುಗಿದ ನಂತರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲಿಕರಿಗೆ ದಂಡವನ್ನ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಎಸ್ಆರ್ಪಿ ನಿಯಮದ ಮೊದಲ ಬಾರಿ ಉಲ್ಲಂಘನೆಗೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಾರೆ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಅಂತೆ. ಹೀಗಾಗಿ ಈಗ ಭಾರಿ ದೊಡ್ಡ ಸಮಸ್ಯೆ ಎದುರಾಗಿದೆ.
ಡೆಡ್ಲೈನ್ ಮುಂದೂಡಿಕೆ ಆಗುತ್ತಾ?
ಹೀಗೆ ಎಚ್ಎಸ್ಆರ್ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಭಾರಿ ಗೊಂದಲ ಏರ್ಪಟ್ಟಿರುವ ಹಿನ್ನೆಲೆ ಕರ್ನಾಟಕ ಸಾರಿಗೆ ಇಲಾಖೆ ನೀಡಿರುವ 2024ರ ಫೆಬ್ರವರಿ 17ರ ಈ ಡೆಡ್ಲೈನ್ ಮುಂದೂಡಿಕೆ ಆಗುವ ನಿರೀಕ್ಷೆ ಇದೆ. ಹಾಗೇ ಅಕಸ್ಮಾತ್ ಇದು ಮುಂದೂಡಿಕೆ ಆಗದೇ ಇದ್ರೆ, ವಾಹನ ಮಾಲೀಕರಿಗೆ ಬರೆ ಗ್ಯಾರಂಟಿ. ಹೀಗಾಗಿ ಜನರು ರೊಚ್ಚಿಗೇದ್ದು ಈಗ ಸರ್ಕಾರದ ವಿರುದ್ಧ ಮುನಿಸಿಕೊಳ್ಳವ ಸಾಧ್ಯತೆ ಇರುವ ಕಾರಣ ಸರ್ಕಾರ ಕೂಡ ಈ ಕುರಿತು ಅಲೋಚನೆ ಮಾಡುತ್ತಿದೆ. ಹಾಗೇ ಕರ್ನಾಟಕ ಸಾರಿಗೆ ಇಲಾಖೆ, ಎಚ್ಎಸ್ಆರ್ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತಷ್ಟು ಕಾಲಾವಕಾಶ ನೀಡುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ : ಟಿಡಿ 193 ಟಿಡಿಒ 2021, ದಿನಾಂಕ : 17-08-2023 ಹಾಗೂ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಸಾಆ/ನೋಂ- 1/30-434/2022-23, ದಿನಾಂಕ : 18-08-2023 ಪ್ರಕಾರ, ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್ಎಸ್ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.