ಉಡುಪಿ: ಮುದ್ರಾ ಸಾಲ ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ಮುದ್ರಾ ಲೋನ್ ಯೋಜನೆಯಡಿ ಸಾಲ ನೀಡುವ ಬಗ್ಗೆ ಜಾಹೀರಾತು ಹಾಕಲಾಗಿದ್ದು ಜಾಹಿರಾತಿನಲ್ಲಿ ನಮೂದಿಸಿದ ನಂಬರ್ ಗೆ ಉಡುಪಿಯ ಶೈಲಾ ಎಂಬವರು ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಮುದ್ರಾ ಯೋಜನೆಯ ಎಜೆಂಟ್ ಎಂಬುದಾಗಿ ನಂಬಿಸಿ, ಸಾಲಕ್ಕೆ ಸಂಬಂಧಿಸಿದ ದಾಖಲಾತಿಯನ್ನು ಪಡೆದು, ನೋಂದಣಿ ಶುಲ್ಕ 18,786ರೂ. ಜಮೆ ಮಾಡುವಂತೆ ತಿಳಿಸಿದ್ದರು. ಅದರಂತೆ ಶೈಲಾ ಗೂಗಲ್ ಪೇ ಮಾಡಿದ್ದು, ಬಳಿಕ ಇತರೆ ಖರ್ಚುಗಳಿಗೆ ಹಣ ಕಟ್ಟುವಂತೆ ತಿಳಿಸಿದ್ದನು. ಹಾಗೆ ಶೈಲಾ ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 9,15,450 ರೂ. ಹಣವನ್ನು ವರ್ಗಾಯಿಸಿದ್ದರು. ಆದರೆ ಆರೋಪಿಗಳು ಶೈಲಾ ಅವರಿಗೆ ಸಾಲವನ್ನು ನೀಡದೆ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.