ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಲ್ಲಿ ಪಾರದರ್ಶಕತೆ ತರಲು ಮತ್ತು ದುರುಪಯೋಗ ತಡೆಯಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸಬೇಕು ಎಂಬ ಉದ್ದೇಶದಿಂದ ಯೋಜನೆಗಳ ಸಮಗ್ರ ಪರಿಶೀಲನೆ ಮತ್ತು ಮರು ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಹೆಸರಿನಲ್ಲೂ ಹಣ ಡ್ರಾ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಿಜವಾದ ಫಲಾನುಭವಿಯನ್ನು ಗುರುತಿಸಲು ಮರು ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ.

ಸರ್ಕಾರವು ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವ್ಯವಸ್ಥೆಯನ್ನು ಸರಿಪಡಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದಿದ್ದಾರೆ. ಕೇವಲ ಗೃಹಲಕ್ಷ್ಮಿ ಮಾತ್ರವಲ್ಲದೆ, ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯಲ್ಲೂ ಕಂಡುಬಂದಿರುವ ಗೊಂದಲಗಳನ್ನು ನಿವಾರಿಸಲು ತನಿಖೆ ಮತ್ತು ಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ.

ಮುಖ್ಯಾಂಶಗಳು:
ಮರು ಅರ್ಜಿ ಸಲ್ಲಿಕೆ ಕಡ್ಡಾಯ: ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮಹಿಳೆಯರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.
100 ಕೋಟಿ ರೂ. ಅಕ್ರಮದ ಶಂಕೆ: ಮೃತರ ಹೆಸರಿನಲ್ಲಿ ಹಣ ಲೂಟಿಯಾಗುತ್ತಿರುವುದನ್ನು ತಡೆಯಲು ಈ ಕಠಿಣ ಕ್ರಮ.
ಗುರುತಿನ ಚೀಟಿ ವಿತರಣೆ: ಮುಂಬರುವ ದಿನಗಳಲ್ಲಿ ಅರ್ಹ ಗ್ಯಾರೆಂಟಿ ಫಲಾನುಭವಿಗಳಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುತ್ತದೆ.
ವಿದ್ಯುತ್ ಮೀಟರ್ ಪರಿಶೀಲನೆ:
ಗೃಹಜ್ಯೋತಿ ಯೋಜನೆಯಡಿ ಒಂದೇ ಹೆಸರಿನಲ್ಲಿರುವ ಹಲವು ಮೀಟರ್‌ಗಳ ತಪಾಸಣೆ.
ಖಾಸಗಿ ಉದ್ಯೋಗ ಮೇಳ: ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಹೊಸ ವೇದಿಕೆ ಹಾಗೂ ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಶಾಲೆಗಳ ಅಭಿವೃದ್ಧಿ.
ಇದೇ ವೇಳೆ ಗ್ರಾಮೀಣ ಭಾಗದ ಶಿಕ್ಷಣ ಸುಧಾರಣೆಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಳ್ಳಲು ಹೊಸ ನೀತಿ ತರಲಾಗುತ್ತಿದೆ. ಕಂಪನಿಗಳು ತಮ್ಮ ಲಾಭದ 2% ಹಣವನ್ನು ಹಳ್ಳಿಗಳ ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ನೀಡಬೇಕಾಗುತ್ತದೆ. ಜೊತೆಗೆ ಸ್ಥಳೀಯ ಯುವಜನರಿಗಾಗಿ ‘ಭಾರತ ಜೋಡೋ ಯುವಕರ ಸಂಘ’ ಸ್ಥಾಪಿಸಿ, 16 ರಿಂದ 40 ವರ್ಷದೊಳಗಿನ ಯುವಕರಿಗೆ ರಾಜಕೀಯೇತರವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.


