ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವೇಣೂರಿನ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಉಂಟಾಗಿರುವ ಕೊರಗಜ್ಜನ ಗುಡಿಗೆ ಸಂಬಂಧಿಸಿದ ವಿವಾದಕ್ಕೆ ಇದೀ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎಂಟ್ರಿ ಆಗಿದ್ದು, ಎರಡು ಕಡೆಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಬಜಿರೆ ಗ್ರಾಮದ ಬಾಡಾರಿನ ಕೊರಗಲ್ಲುನಲ್ಲಿ ಆರಾಧಿಸಲ್ಪಡುತ್ತಿರುವ ಕೊರಗಜ್ಜ ದೈವದ ಪೂಜೆಗಾಗಿ ಸ್ಥಳೀಯ ಗ್ರಾಮಸ್ಥರು ಸಾರ್ವಜನಿಕ ಸಮಿತಿ ಮಾಡಿದ್ದರು, ಆದರೆ ಇದಕ್ಕೆ ಕೊರಗಜ್ಜನ ಗುಡಿ ಇರುವ ಜಾಗದವರು ವಿರೋಧ ವ್ಯಕ್ತಪಡಿಸಿದರು. ಈ ನಡುವೆ ವಿವಾದ ತಾರಕಕ್ಕೇರಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ನಡುವೆ ಗಲಾಟೆ ನಡೆದು, ಕಳೆದ ಎಪ್ರಿಲ್ ನಲ್ಲಿ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಲಾಗಿತ್ತು. ಈ ವಿವಾದ ಉಲ್ಬಣವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಂದಿನ ಕ್ರಮದ ವರೆಗೆ ಕೊರಗಜ್ಜನ ಗುಡಿಯ ವಿಚಾರಕ್ಕೆ ಯಾರೂ ಹಸ್ತ ಕ್ಷೇಪ ಮಾಡದಂತೆ ಆದೇಶ ಹೊರಡಿಸಿದ್ದರು.
ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಬಾಡಾರು ಕೊರಗಲ್ಲು ಸ್ಥಳಕ್ಕೆ ಭೇಟಿ ನೀಡಿದರು. ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸಿಬಿ ಜೊತೆಗೆ ಬಾಡಾರು ಪ್ರದೇಶಕ್ಕೆ ಭೇಟಿ ನೀಡಿ ಡಿಸಿ ವಿವಾದಿತ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಬೆಳ್ತಂಗಡಿ ಮಿನಿವಿಧಾಸೌಧದಲ್ಲಿ ಸಭೆ ವಿವಾದಕ್ಕೆ ಸಂಬಂಧಿಸಿ ಎರಡೂ ಕಡೆಯವರ ಜೊತೆ ಡಿಸಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.