ಮುಲ್ಕಿ : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳುವಾಗಿದ್ದ ಬೈಕ್ ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಸುರತ್ಕಲ್ನ ಮುಕ್ಕ ನಿವಾಸಿ ಮೊಹಮ್ಮದ್ ರಾಝಿಕ್ (36) ಮತ್ತು ಬೈಕಂಪಾಡಿಯ ಅಂಗರಗುಂಡಿ ನಿವಾಸಿ ಉಬೈದತ್ ಹೈದರ್ (31) ಬಂಧಿತ ಆರೋಪಿಗಳಾಗಿದ್ದಾರೆ. ಮುಲ್ಕಿ ಠಾಣೆಯ ಪಿಎಸ್ಐ ಹಾಗೂ ಕ್ರೈಂ ಇನ್ವೆಸ್ಟಿಗೇಷನ್ ತಂಡ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ.

ಮೇ 18 ರಂದು ಮುಲ್ಕಿ ಜಂಕ್ಷನ್ ಬಳಿಯ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಲಾಗಿದ್ದ ಹೋಂಡಾ ಯುನಿಕಾರ್ನ್ (KA 20 EB 6383) ಬೈಕ್ ಅನ್ನು ಯಾರೋ ಖದೀಮರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತರಿಂದ ಸುಮಾರು 20,000/- ರೂ. ಮೌಲ್ಯದ ಕಳುವಾಗಿದ್ದ ಹೋಂಡಾ ಯುನಿಕಾರ್ನ್ ಬೈಕ್ ಮತ್ತು ಸುಮಾರು 18,000/- ರೂ. ಮೌಲ್ಯದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಸದ್ಯ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ತನಿಖೆಯ ವೇಳೆ ಬಂಧಿತ ಇಬ್ಬರೂ ಆರೋಪಿಗಳ ಮೇಲೆ ಈಗಾಗಲೇ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಮೊಹಮ್ಮದ್ ರಾಝಿಕ್ ಹಿಸ್ಟರಿ: ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಒಂದು (ಅಕ್ರ ನಂಬ್ರ 98/2024), ಪಣಂಬೂರು ಠಾಣೆಯಲ್ಲಿ ಒಂದು (ಅಕ್ರ ನಂಬ್ರ 88/2019) ಹಾಗೂ ಮುಲ್ಕಿ ಠಾಣೆಯಲ್ಲಿ ಒಂದು (ಅಕ್ರ ನಂಬ್ರ 110/2023) ಸೇರಿದಂತೆ ಒಟ್ಟು ಮೂರು ಗಾಂಜಾ ಮಾರಾಟ ಮತ್ತು ಸೇವನೆ ತಡೆ ಕಾಯ್ದೆಯಡಿ (NDPS Act) ಪ್ರಕರಣಗಳು ದಾಖಲಾಗಿವೆ.
ಉಬೈದತ್ ಹೈದರ್ ಹಿಸ್ಟರಿ: ಈತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯೊಂದರಲ್ಲೇ ಗಲಭೆ, ಕಾನೂನುಬಾಹಿರ ಕೂಟ ರಚನೆ, ಮಾರಕಾಸ್ತ್ರಗಳಿಂದ ಹಲ್ಲೆ, ಜೀವ ಬೆದರಿಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ಒಟ್ಟು 4 ಗಂಭೀರ ಕ್ರಿಮಿನಲ್ ಪ್ರಕರಣಗಳು (ಕೇಸ್ ನಂಬ್ರಗಳು: 03/2002, 42/2014, 42/2014 ಮತ್ತೊಂದು ಹಾಗೂ 140/2014) ದಾಖಲಾಗಿವೆ.


