ಉಡುಪಿ: 2023 ಜುಲೈ ತಿಂಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಡಿಸಿದ ಅಂಕಿ ಅಂಶಗಳು ದಿಗ್ಭ್ರಮೆಗೊಳಿಸುವಂಥದ್ದು. ಇದರ ಪ್ರಕಾರ 2019-2021ರ ವರೆಗಿನ ಮೂರು ವರ್ಷದ ಅವಧಿಯಲ್ಲಿ 13ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ 31,935 ಮಹಿಳೆಯರು ಹಾಗೂ ಬಾಲಕಿಯರು ಕರ್ನಾಟಕದಿಂದ ನಾಪತ್ತೆಯಾಗಿದ್ದಾರೆಂದು ವರದಿಯು ತಿಳಿಸುತ್ತದೆ. ಮಹಿಳಾಪರ ಸರ್ಕಾರ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವುದು ಅಕ್ಷಮ್ಯ. ಆದ್ದರಿಂದ ಸರ್ಕಾರ ಆದ್ಯತೆಯ ಮೇರೆಗೆ ವಿಶೇಷ ತನಿಖಾ ತಂಡದ ಮುಖಾಂತರ ಸಮಗ್ರ ತನಿಖೆ ನಡೆಸಬೇಕು ಹಾಗೂ ಮಹಿಳಾ ಭದ್ರತೆಯ ಬಗ್ಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ನಡೆಸಿದ ಸಭೆಯಲ್ಲಿ ಒತ್ತಾಯಿಸಲಾಯಿತು.
ಎರಡು ದಿನಗಳ ವಿಮ್ ರಾಜ್ಯ ಕಾರ್ಯಕಾರಿಣಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದು ರಾಜ್ಯದ ಬಹಳಷ್ಟು ಸಮಸ್ಯೆಗಳತ್ತ ರಾಜ್ಯ ಸರಕಾರ ಗಮನ ಕೊಡಬೇಕು. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ದಲಿತ, ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ವರ್ಗಗಳ ಪರ ಅಭಿವೃದ್ಧಿ ವಿಷಯದಲ್ಲಿ ಹಾಗೂ ಅವರ ಮೇಲಾಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನಾರ್ಹ. ಹಿಜಾಬ್, 2ಬಿ ಮೀಸಲಾತಿ ಮರು ಸ್ಥಾಪಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ತಾಳಿದೆ. ಬಜೆಟ್ ನಲ್ಲೂ ಅಲ್ಪಸಂಖ್ಯಾತರನ್ನು ಕಡೆಗೆಣಿಸಿರುವುದು ಗಮನಾರ್ಹ. ಇಂತಹ ನಿರ್ಲಕ್ಷತನವನ್ನು ಕೈ ಬಿಟ್ಟು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸ ಬೇಕೆಂದು ಸಭೆಯು ಆಗ್ರಹಿಸಿದೆ. ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್ ಮಹಿಳಾ ಸಂಘಟನೆ ಅನಿವಾರ್ಯತೆಯ ಬಗ್ಗೆ ಮಾತಾಡಿದರು,ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿದ ಈ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆಯರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷೆ-ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.