ತೆಕ್ಕಾರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಿರುವ ಮನೆಗೆ ಏಕಾ ಏಕಿ ನುಗ್ಗಿದ ಐದು ಮಂದಿ ದುಷ್ಕರ್ಮಿಗಳ ತಂಡ ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದಘಟನೆ ಸಂಭವಿಸಿದೆ.
ಹಲ್ಲೆಗೊಳಗಾದ ಯುವಕನನ್ನು ಮುಝಮ್ಮಿಲ್ (19) ಎಂಡೋಸಲ್ಫಾನ್ ಪೀಡಿತ ಸಂತ್ರಸ್ತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವನಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯನ್ನು ಆತನ ತಾಯಿ ಮೈಮುನ (38) ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆ ಐದು ಮಂದಿ ದುಷ್ಕರ್ಮಿಗಳ ಗುಂಪು ಒಂಟಿ ಮಹಿಳೆ ಹಾಗೂ ಎಂಡೋಸಲ್ಫಾನ್ ಪೀಡಿತ ಮಗ ವಾಸವಿರುವ ಮನೆಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಸಂದರ್ಭದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಗ ಬೊಬ್ಬೆಹಾಕಿ ಅಡ್ಡ ಬಂದಾಗ ಮಗನಿಗೂ ಮನಬಂದಂತೆ ಥಳಿಸಿದ್ದರು ಎನ್ನಲಾಗಿದೆ.
ಸಂತ್ರಸ್ತ ಮಹಿಳೆ ಹಾಗೂ ಹಲ್ಲೆಗೊಳಗಾದ ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.