ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಹಾವಳಿ: ಒಂದು ಗಂಟೆ ಕಾಲ ಸಂಚಾರ ಸ್ಥಗಿತ, ಸವಾರರ ಪರದಾಟ

Prakhara News
1 Min Read

ಬೆಳ್ತಂಗಡಿ :  ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಕಾಡಾನೆಯಿಂದಾಗಿ  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಯಿತು.

ಸೋಮವಾರ ಬೆಳಗ್ಗೆ ಚಾರ್ಮಾಡಿ ಘಾಟ್ ರಸ್ತೆಯ 10ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ರಸ್ತೆಯ ಮಧ್ಯಭಾಗದಲ್ಲೇ ಆನೆಯು ಬೀಡುಬಿಟ್ಟಿದ್ದರಿಂದ ವಾಹನ ಸವಾರರು ಆತಂಕಕ್ಕೊಳಗಾಗಿ ಇದ್ದಲ್ಲಿಯೇ ವಾಹನಗಳನ್ನು ನಿಲ್ಲಿಸಿದರು. ಇದರಿಂದಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ದ್ವಿಚಕ್ರ ಹಾಗೂ ಲಘು ವಾಹನ ಸವಾರರು ಆನೆಯ ಭೀತಿಯಿಂದ ರಸ್ತೆಯಲ್ಲೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ಸುಮಾರು ಒಂದು ಗಂಟೆಯ ನಂತರ ಆನೆಯು ಕಾಡಿನತ್ತ ಮುಖ ಮಾಡಿದ ಬಳಿಕ ಸಂಚಾರ ಸುಗಮಗೊಂಡಿತು. ಘಾಟಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

Share This Article
Leave a Comment