ಮಂಗಳೂರು : ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಗುರುಪುರ ನದಿಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಸುಲ್ತಾನ್ ಬತ್ತೇರಿ ಸೇತುವೆ ಸೆಪ್ಟೆಂಬರ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ಶುಕ್ರವಾರ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಜೂನ್ ತಿಂಗಳೊಳಗೆ ಗರ್ಡರ್ಗಳ ಲಾಂಚಿಂಗ್ ಪೂರ್ಣಗೊಳ್ಳಲಿದೆ ಎಂದರು. ಬಳಿಕ ಈ ಭಾಗದಲ್ಲಿ ಬೋಟ್ ಸಂಚಾರಕ್ಕೂ ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಸುಮಾರು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆಯಿಂದ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ನಡುವಿನ ಸಂಪರ್ಕ ಸುಗಮವಾಗಲಿದ್ದು, ಪ್ರಯಾಣದ ಸಮಯ ಸುಮಾರು ಅರ್ಧ ಗಂಟೆಯಷ್ಟು ಕಡಿಮೆಯಾಗಲಿದೆ. ಬೆಂಗ್ರೆ ಭಾಗದ ಸುಮಾರು 4 ಸಾವಿರ ಕುಟುಂಬಗಳಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಬೋಟ್ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ರಾಷ್ಟ್ರೀಯ ಮಟ್ಟದ ಮಾರ್ಗಸೂಚಿಗಳ ಅನುಸಾರ ಸೇತುವೆಯನ್ನು ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಎಲ್ಲ ರೀತಿಯ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಬ್ಲೂ ಫ್ಲ್ಯಾಗ್ ಬೀಚ್ ರಸ್ತೆ ಸಂಪರ್ಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಪೂರಕವಾಗಲಿದೆ ಎಂದು ಹೇಳಿದರು.

ಬೋ-ಸ್ಟ್ರಿಂಗ್ ಗರ್ಡರ್ ವಿಶೇಷತೆ 285 ಮೀಟರ್ ಉದ್ದದ ಈ ಸೇತುವೆಯಲ್ಲಿ 100 ಮೀಟರ್ ನಾವಿಗೇಶನ್ ಸ್ಪಾನ್ ಹಾಗೂ 10 ಮೀಟರ್ ವರ್ಟಿಕಲ್ ಕ್ಲಿಯರೆನ್ಸ್ ಒದಗಿಸಲು ಬೋ-ಸ್ಟ್ರಿಂಗ್ ಗರ್ಡರ್ ಅಳವಡಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲೇ ಅತಿ ಉದ್ದದ ಬೋ-ಸ್ಟ್ರಿಂಗ್ ಗರ್ಡರ್ ಹೊಂದಿರುವ ಸೇತುವೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಸೇತುವೆ ಹೈ ಟೈಡ್ ಲೈನ್ನಿಂದ 10 ಮೀಟರ್ ಎತ್ತರದಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣ ಸಮಯದಲ್ಲಿ ಭಾರೀ ಇಳಿಕೆ ಪ್ರಸ್ತುತ ಈ ಭಾಗದ ಜನರು ನದಿ ದಾಟಲು ದೋಣಿಯನ್ನೇ ಅವಲಂಬಿಸಬೇಕಾಗಿದೆ. ಕೂಳೂರು ರಸ್ತೆ ಮಾರ್ಗವಾಗಿ ಸಂಚರಿಸಿದರೆ ಸುಮಾರು 15 ಕಿ.ಮೀ ದೂರ ಸಾಗಬೇಕಾಗಿದ್ದು, ವಾಹನ ದಟ್ಟಣೆಯಿಂದ 30ರಿಂದ 35 ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ. ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕ ಬೆಂಗ್ರೆ, ತಣ್ಣೀರುಬಾವಿ ಹಾಗೂ ಮಂಗಳೂರು ನಗರದ ನಡುವಿನ ಪ್ರಯಾಣ ಸಮಯ 8ರಿಂದ 10 ನಿಮಿಷಗಳಿಗೆ ಇಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಮನಪಾ ಮಾಜಿ ಸದಸ್ಯರಾದ ಎ.ಸಿ. ವಿನಯರಾಜ್, ಅನಿಲ್ ಕುಮಾರ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


