ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಮತ್ತೆ ಉನ್ನತ ಹುದ್ದೆಗೆ ನಿಯೋಜಿಸಿದ ಸರ್ಕಾರ!

Prakhara News
1 Min Read

ಬೆಂಗಳೂರು: ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಹೊರಬಿದ್ದಿದ್ದ ವಿವಾದಾತ್ಮಕ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ರಾಸಲೀಲೆ ಆರೋಪದ ಹಿನ್ನೆಲೆ ಹಿಂದೆ ನೀಡಲಾಗಿದ್ದ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಐಜಿಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ, ಕಚೇರಿಯಲ್ಲಿಯೇ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆಸಿದರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಯಿತು. ಈ ಹಿನ್ನೆಲೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿತ್ತು.

ಆದರೆ, ಈಗ ಸರ್ಕಾರ ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿದೆ. ಇದರ ಹಿಂದೆ ಪ್ರಮುಖ ಕಾರಣವಾಗಿ ಅವರ ಸೇವಾ ನಿವೃತ್ತಿ ಸಮೀಪಿಸುತ್ತಿರುವುದು ಹೇಳಲಾಗುತ್ತಿದೆ. ಇದೇ ತಿಂಗಳ 31ರಂದು ಅವರು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಾನತು ಆದೇಶವನ್ನು ಹಿಂಪಡೆಯುವ ಜೊತೆಗೆ, ರಾಮಚಂದ್ರ ರಾವ್ ಅವರಿಗೆ “ಡಿಜಿಪಿ ಪೊಲೀಸ್ ಮ್ಯಾನ್ಯುವಲ್” ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿ ನಿಯೋಜನೆ ಮಾಡಲಾಗಿದೆ. ಈ ಹುದ್ದೆ ತಾತ್ಕಾಲಿಕವಾಗಿದ್ದು, ನಿವೃತ್ತಿಯವರೆಗೆ ಅವರಿಗೆ ಕರ್ತವ್ಯ ನೀಡಲಾಗಿದೆ.

ಈ ನಡುವೆ, ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿ ಏನೆಲ್ಲ ಅಂಶಗಳಿವೆ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ, ಆದರೂ ಅದರ ಆಧಾರದ ಮೇಲೆಯೇ ಸರ್ಕಾರ ಮುಂದಿನ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

Share This Article
Leave a Comment