ಕುದ್ರೋಳಿ ಗೋಕರ್ಣ ಕ್ಷೇತ್ರ ಆಡಳಿತ ಮಂಡಳಿ ವಿವಾದ – ನೂತನ ಆಡಳಿತ ಸಮಿತಿ ರಚನೆ ವದಂತಿ ಸತ್ಯಕ್ಕೆ ದೂರ; ಪದ್ಮರಾಜ್ ಆರ್. ಸ್ಪಷ್ಟನೆ

Prakhara News
1 Min Read

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಖಿಲ ಭಾರತ ಬಿಲ್ಲವರ ಯೂನಿಯನ್ ಬೈಲಾ ಪ್ರಕಾರ ಹೊಸ ಸಮಿತಿ ರಚನೆಯಾಗಿದೆ ಎಂಬ ಕೆಲವರ ಹೇಳಿಕೆ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಆದರೆ ಕಳೆದ 35 ವರ್ಷಗಳಿಂದ ಈ ಯೂನಿಯನ್ ಮತ್ತು ಕುದ್ರೋಳಿ ಕ್ಷೇತ್ರದ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ಯೂನಿಯನ್‌ನಲ್ಲಿ 18 ವರ್ಷ ಮೇಲ್ಪಟ್ಟ ಸಮುದಾಯದವರಿಗೆ ಸದಸ್ಯತ್ವ ನೀಡಬೇಕು ಎಂಬ ನಿಯಮವಿದ್ದರೂ, ಅಲ್ಲಿರುವವರು ತಮಗೆ ಬೇಕಾದವರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದಾರೆ ಮತ್ತು ಬೈಲಾ ಪಾಲನೆಯಾಗುತ್ತಿಲ್ಲ ಎಂದು ಅವರು ಆರೋಪಿಸಿದರು. “ದೇವಸ್ಥಾನದ ಸ್ಥಾಪಕ ಸಾಹುಕರ್ ಕೊರಗಪ್ಪ ಅವರ ಮೊಮ್ಮಗನೇ ಸಮಿತಿಯ ಅಧ್ಯಕ್ಷರಾಗಿದ್ದಾರೆ. 2025ರ ಜೂನ್ 20ರಂದು ನಡೆದ ಸಭೆಯಲ್ಲಿ ಕಾನೂನಾತ್ಮಕವಾಗಿಯೇ ಹೊಸ ಸಮಿತಿ ರಚಿಸಲಾಗಿದೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮಾತನಾಡಿರುವ ಇತರರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ” ಎಂದು ಕ್ಷೇತ್ರದ ಕಾನೂನು ಸಲಹೆಗಾರ ಚಿದಾನಂದ ಕೆದಲಾಯ ತಿಳಿಸಿದರು.

Share This Article
Leave a Comment