ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಉಜಿರೆ ಸೌಜನ್ಯ ಅತ್ಯಾಚಾರ ಕೊಲೆ ಕೇಸ್ ಸಂಬಂಧ ಇತ್ತೀಚೆಗೆ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿತ್ತು. ಬರೋಬ್ಬರಿ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಅಂತಿಮ ತೀರ್ಪು ನೀಡಿದ್ದ ಸಿಬಿಐ ಕೋರ್ಟ್, ಆರೋಪಿ ಸಂತೋಷ್ ರಾವ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಇದೆ. ಹೀಗಾಗಿ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಮೂರ್ತಿ ಸಿಬಿ ಸಂತೋಷ್ ನೇತೃತ್ವದ ಏಕಸದಸ್ಯ ನಾಯಪೀಠ ಆದೇಶ ಹೊರಡಿಸಿದೆ. ಈ ಬೆನ್ನಲ್ಲೀಗ ಸೌಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಜುಲೈ 28ನೇ ತಾರೀಕಿನಂದು ಧರಣಿಗೆ ಮುಂದಾಗಿದೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಜುಲೈ 28ನೇ ತಾರೀಕು ರಾಜ್ಯದ 60ಕ್ಕೂ ಹೆಚ್ಚು ಸಂಘಟನೆಗಳು ಈ ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ಈ ಸಂಬಂಧ ಮಾತಾನಾಡಿದ ಕರ್ನಾಟಕ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಮುಖಂಡರು, ವಕೀಲರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಅಖಿಲ ವಿದ್ಯಾಸಂದ್ರ ಅವರು, ಸೌಜನ್ಯ ಮೇಲೆ ನಡೆದದ್ದು ಅತ್ಯಂತ ಕ್ರೂರ ಅತ್ಯಾಚಾರ. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಲಿ ಎಂದರು.ಮುಂದುವರಿದು ಸೌಜನ್ಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ನ್ಯಾಯಾಲಯ ಸರಿಯಾದ ರೀತಿಯಲ್ಲಿ ತನಿಖೆ ನಡೆಸುವಂತೆ ಆದೇಶಿಸಬೇಕು. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ಆಗಬೇಕು. ಅದಕ್ಕಾಗಿ ಎಸ್ಐಟಿ ರಚನೆ ಮಾಡಬೇಕು. ಯಾವುದೇ ರಾಜಕೀಯ ಪ್ರಭಾವಕ್ಕೂ ಬಲಿಯಾಗದಂತೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ಕರ್ತವ್ಯ ನಿಭಾಯಿಸದೆ ಹೋದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ. ನಮ್ಮ ಮನವಿಯನ್ನು ಪುರಸ್ಕರಿಸಿ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಹಿರಿಯ ವಕೀಲರಾದ ಅಖಿಲ ವಿದ್ಯಾಸಂದ್ರ ತಿಳಿಸಿದರು.