ಸುರತ್ಕಲ್ : ಕ್ಷೇತ್ರದಲ್ಲಿ ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿ, ಕೊಡಿಪಾಡಿ, ಧರ್ಮದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವವು ದಿನಾಂಕ 28-04-2026 ಮಂಗಳವಾರದಿಂದ 03-05-2026 ಆದಿತ್ಯವಾರದವರೆಗೆ ಭಕ್ತಿಭಾವಪೂರ್ವಕವಾಗಿ ನಡೆಯಲಿದ್ದು ಈ ಮಹೋತ್ಸವವು ಕ್ಷೇತ್ರದ ಭಕ್ತರಲ್ಲಿ ವಿಶೇಷ ಧಾರ್ಮಿಕ ಉತ್ಸಾಹವನ್ನು ಮೂಡಿಸುವಂತಾಗಿದೆ ಎಂದು ಶ್ರೀ ಕೊಡಮಣಿತ್ತಾಯ ಶ್ರೀ ಬ್ರಹ್ಮ – ಬೈದರ್ಕಳ ಸೇವಾ ಸಮಿತಿಯ ಅಧ್ಯಕ್ಷರಾದ ರೂಪೇಶ್ ರೈಯವರು ತಿಳಿಸಿದ್ದಾರೆ.




ಈ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿಗಳು ಹಾಗೂ ಕ್ಷೇತ್ರದ ಆರಾಧ್ಯ ಶಕ್ತಿಗಳಾದ ಶ್ರೀಧರ್ಮರಸು ಉಳ್ಳಾಯ, ಶ್ರೀಕೊಡಮಣಿತ್ತಾಯ ಮತ್ತು ತುಳುನಾಡಿನ ಕಾರಣೀಕ ಪುರುಷರಾದ ಶ್ರೀಕೋಟಿ-ಚೆನ್ನಯ್ಯ ( ಬ್ರಹ್ಮ-ಬೈದರ್ಕಳ ) ಮತ್ತು ಶಕ್ತಿ ಸ್ವರೂಪಿಣಿಯಾಗಿರುವ ಶ್ರೀಮಾಯಂದಾಲೆ ಧರ್ಮದೈವಗಳ ನೇಮೋತ್ಸವ ಜರುಗಲಿದೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರು ಶ್ರೀ ಪದ್ಮರಾಜ್ ಆರ್.ಪೂಜಾರಿ ಕುದ್ರೋಳಿ ರವರು ಮಾತನಾಡಿ ಮಹೋತ್ಸವವು ಶ್ರೀಕ್ಷೇತ್ರದ ಸಂಪ್ರದಾಯದ ವೈಭವವನ್ನು ಪ್ರತಿಬಿಂಬಿಸಲಿವೆ. ಮಹೋತ್ಸವದ ಅವಧಿಯಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಸಮರ್ಪಕವಾಗಿ ಕಲ್ಪಿಸಲಾಗಿದ್ದು,ದೂರದ ಊರುಗಳಿಂದ ಆಗಮಿಸುವ ಭಕ್ತರಿಗಾಗಿ ಅಗತ್ಯ ಸೌಕರ್ಯಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಶ್ರೀಕ್ಷೇತ್ರದ ಅಭಿವೃದ್ಧಿ ಹಾಗೂ ಪುನರ್-ಪ್ರತಿಷ್ಠೆ ಕಾರ್ಯಗಳನ್ನು ನೆರವೇರಿಸಲು ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಧ್ವಜಸ್ತಂಭ,ರಾಜಗೋಪುರ, ಪ್ರಧಾನ ಮಹಾದ್ವಾರ, ತೀರ್ಥಕೆರೆ, ವಸಂತಕಟ್ಟೆ, ರಾಜನ್ ದೈವಗಳ ದೈವಸ್ಥಾನ, ಬ್ರಹ್ಮ ಬೈದರ್ಕಳ ಮಾಯಂದಾಲೆ ಶಕ್ತಿಗಳ ಗರೋಡಿಯು ಪುನರ್‌ನಿರ್ಮಾಣವಾಗಿದೆ. ಭಕ್ತರ ಸಹಕಾರ ಮತ್ತು ದಾನಧರ್ಮದ ಫಲವಾಗಿ ಈ ಮಹತ್ವದ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಡಿಪಾಡಿ ಬಾಳಿಕೆ ಸುರತ್ಕಲ್ ನ ಯಜಮಾನರು ಹಾಗೂ ಗಡಿಪ್ರಧಾನರಾದ ಜಗನ್ನಾಥ ಅತ್ತಾರ್,ಸುರೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾದ್ಯಕ್ಷರಾದ ಭುಜಂಗ ಶೆಟ್ಟಿ ಕೊಡಿವಾಡಿಬಾಳಿಗೆ,ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಮುಂಚೂರು,ಶೋಧನ್ ಕೊಟ್ಟಾರಿ,ಪ್ರಫುಲ್ಲ ಶೆಟ್ಟಿ ಕೊಡೊವಾಡಿ ಬಾಳಿಕೆ ಯವರು ಉಪಸ್ಥಿತರಿದ್ದರು.


