ಬಂಟ್ವಾಳ : ವೇದಿಕೆಯಲ್ಲೇ ಕುಸಿದು ಬಿದ್ದು ಯುವ ನಿರೂಪಕ ಸಾವು

Prakhara News
1 Min Read

ಬಂಟ್ವಾಳ: ಸಂಭ್ರಮದ ಮದರಂಗಿ ಕಾರ್ಯಕ್ರಮವೊಂದು ಕ್ಷಣಾರ್ಧದಲ್ಲಿ ಶೋಕಸಾಗರವಾಗಿ ಮಾರ್ಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಏಪ್ರಿಲ್ 10ರಂದು ರಾತ್ರಿ ಸಂಭವಿಸಿದೆ. ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ವೇಳೆ ಯುವ ನಿರೂಪಕರೊಬ್ಬರು ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಿತ್ (32) ಮೃತಪಟ್ಟ ದುರ್ದೈವಿ. ಇವರು ಉತ್ತಮ ನಿರೂಪಕರಾಗಿ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ನಾಯಿಲದಲ್ಲಿರುವ ತನ್ನ ಸಂಬಂಧಿಕರ ಮನೆಯ ಮದರಂಗಿ ಕಾರ್ಯಕ್ರಮದಲ್ಲಿ ಅಶ್ವಿತ್ ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿತ್ತು. ಅದರಂತೆ ಶುಕ್ರವಾರ ರಾತ್ರಿ (ಏಪ್ರಿಲ್ 10) ಅವರು ಅತ್ಯಂತ ಉತ್ಸಾಹದಿಂದ ವೇದಿಕೆ ಏರಿ ಕಾರ್ಯಕ್ರಮದ ಮುನ್ನುಡಿ ಬರೆಯುತ್ತಿದ್ದರು. ಆದರೆ, ಮಾತು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವರು ತೀವ್ರ ಅಸ್ವಸ್ಥಗೊಂಡು ಇದ್ದಕ್ಕಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.

ಅಶ್ವಿತ್ ಕುಸಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸಂಬಂಧಿಕರು ಹಾಗೂ ಸಾರ್ವಜನಿಕರು ತಕ್ಷಣ ಅವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆಪರೀಕ್ಷಿಸಿದ ವೈದ್ಯರು, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಹೃದಯಾಘಾತವೇ ಈ ಸಾವಿಗೆ ಕಾರಣ ಎಂದು ಹೇಳಲಾಗಿದೆ.

Share This Article
Leave a Comment