ಅಹಮದಾಬಾದ್ : ಅಹಮದಾಬಾದ್ನ ಸ್ಥಳೀಯ ಅಂಗಡಿಯಿಂದ ಖರೀದಿಸಿದ ಹಿಟ್ಟಿನಿಂದ ತಯಾರಿಸಿದ ದೋಸೆಯನ್ನು ಕುಟುಂಬವು ಸೇವಿಸಿದ ನಂತರ, ಅವರ ಮೂರು ತಿಂಗಳ ಮಗು ಮತ್ತು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದಖೇಡ ಪ್ರದೇಶದಲ್ಲಿ ಶಂಕಿತ ಆಹಾರ ವಿಷಾಹಾರಕ್ಕೆ (Food Poisoning) ಇಬ್ಬರು ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಮಾರುಕಟ್ಟೆಯಿಂದ ತಂದಿದ್ದ ರೆಡಿಮೇಡ್ ದೋಸೆ ಹಿಟ್ಟಿನಿಂದ ತಯಾರಿಸಿದ ಆಹಾರ ಸೇವಿಸಿದ ನಂತರ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.


ವಿಮಲ್ ಪ್ರಜಾಪತಿ ಎಂಬುವವರು ಏಪ್ರಿಲ್ 1ರಂದು ಸ್ಥಳೀಯ ‘ಘನಶ್ಯಾಮ್ ಡೈರಿ’ಯಿಂದ ದೋಸೆ ಹಿಟ್ಟು ಖರೀದಿಸಿದ್ದರು. ಅದನ್ನು ಸೇವಿಸಿದ ನಂತರ ವಿಮಲ್ ಅವರಿಗೆ ವಾಂತಿ ಆರಂಭವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಷಯ ತಿಳಿಯದ ಅವರ ಪತ್ನಿ ಭಾವನಾ ಅದೇ ಹಿಟ್ಟಿನಿಂದ ದೋಸೆ ತಯಾರಿಸಿ ತಾನು ಸೇವಿಸಿ, 4 ವರ್ಷದ ಮಗಳು ಮಿಶ್ರಿಗೂ ನೀಡಿದ್ದರು. . ಆದರೆ, ಅವರ ಮೂರು ತಿಂಗಳ ಮಗಳು ರಾಹಾ, ತಾಯಿಯ ಎದೆಹಾಲು ಕುಡಿದ ತಕ್ಷಣ ಆರೋಗ್ಯ ಹದಗೆಟ್ಟಿತು. ಏಪ್ರಿಲ್ 4ರಂದು ಎರಡೂವರೆ ತಿಂಗಳ ಶಿಶು ರಾಹಾ ಮನೆಯಲ್ಲೇ ಮೃತಪಟ್ಟರೆ, ಏಪ್ರಿಲ್ 5ರಂದು 4 ವರ್ಷದ ಮಿಶ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ದಂಪತಿಗಳ ಸ್ಥಿತಿ ಈಗಲೂ ಗಂಭೀರವಾಗಿದ್ದು, ಕೆಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಂದಖೇಡ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಡೈರಿಯಿಂದ ಹಿಟ್ಟಿನ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. “ನೂರಾರು ಗ್ರಾಹಕರು ಅದೇ ಬ್ಯಾಚ್ನ ಹಿಟ್ಟನ್ನು ಖರೀದಿಸಿದ್ದು, ಯಾರಿಗೂ ತೊಂದರೆಯಾಗಿಲ್ಲ” ಎಂದು ಡೈರಿ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜೆ.ಕೆ. ಮಕ್ವಾನಾ ತಿಳಿಸಿದ್ದಾರೆ.




