ಮೂಡುಬಿದಿರೆ : ಪುತ್ತಿಗೆ ಗ್ರಾಮದ ವಿದ್ಯಾಗಿರಿ ಬಳಿಯ ಬಾಡಿಗೆ ವಸತಿಗೃಹದಲ್ಲಿ ವಾಸವಿದ್ದ ಸವಿತಾ ಎಂಬ ಮಹಿಳೆಯ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಸವಿತಾ ಸಾವಿಗೆ ಪತಿ ದಿನೇಶ್ ಕಾರಣ ಎಂದು ಆರೋಪಿಸಿ ಮೃತಳ ಸಹೋದರಿ ಶಶಿಕಲಾ ಬುಧವಾರ ಮೂಡುಬಿದಿರೆ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ.


ರಿಯಲ್ ಎಸ್ಟೇಟ್ ಉದ್ಯಮಿಯಾದ ದಿನೇಶ್ ಮತ್ತು ಪತ್ನಿ ಸವಿತಾ ತಮ್ಮ ಇಬ್ಬರು ಮಕ್ಕಳೊಂದಿಗೆ ಹಲವು ಸಮಯದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಮನೆಯಲ್ಲಿ ನಡೆದ ಘಟನೆಯೊಂದರಲ್ಲಿ ಸವಿತಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಮೂಡುಬಿದಿರೆ ಮತ್ತು ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಆರಂಭದಲ್ಲಿ ಸವಿತಾ ಅವರಿಗೆ ಲೋಬಿಪಿ (Low BP) ಇದ್ದು, ಮನೆಯಲ್ಲಿ ಕುಸಿದು ಬಿದ್ದಾಗ ತಲೆಗೆ ಏಟಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ದಂಪತಿಗಳ ನಡುವೆ ಸಂಬಂಧ ಹಳಸಿತ್ತು ಎನ್ನಲಾಗಿದ್ದು, ಸಾವಿನ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ಇದೀಗ ಸಹೋದರಿಯೇ ದೂರು ನೀಡಿರುವುದರಿಂದ ಪೊಲೀಸರು ಪತಿ ದಿನೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.



