ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು..!! ಬೆಚ್ಚಿ ಬಿದ್ದ ಸ್ಥಳೀಯರು..

Prakhara News
1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆ ಹತ್ತನೇ ಮೈಲ್‌ಕಲ್ಲು ಸಮೀಪದ ನೇತ್ರಾವತಿ ನದಿ ತೀರದ ಸಮೀಪ
ಮಂಗಳವಾರ ಸಂಜೆ ಸ್ಥಳೀಯರು ನದಿಯಲ್ಲಿ ತೇಲಿ ಬರುತ್ತಿದ್ದ ಆಧಾರ್ ಕಾರ್ಡ್‌ಗಳನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಹಲವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪುದು ಗ್ರಾಮದ ಅನೇಕ ಮನೆಗಳ ವಿಳಾಸ ಹೊಂದಿರುವ ಕಾರ್ಡ್‌ಗಳು ನದಿ ಬದಿಯಲ್ಲಿ ಚದುರಿಕೊಂಡಿರುವುದು ಕಂಡುಬಂದಿದೆ
ಈ ಕುರಿತು ಪ್ರತಿಕ್ರಿಯಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮಸ್ಥರಿಗೆ ಆಧಾರ್ ಕಾರ್ಡ್ ತಲುಪದೆ ಸಾರ್ವಜನಿಕರು ಹಣ ನೀಡಿ ಸೈಬರ್ ಕೇಂದ್ರಗಳಿಂದ ಪ್ರತಿಗಳನ್ನು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಾವಿರಾರು ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿರುವುದು ಗಂಭೀರ ವಿಷಯವಾಗಿದ್ದು, ಇದರ ಹಿಂದೆ ಯಾರು ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು..

ಸ್ಥಳೀಯ ಶಾಸಕರಿಗೂ ಗ್ರಾಮ ಪಂಚಾಯತ್ ವತಿಯಿಂದ ದೂರು ಸಲ್ಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಅಂಚೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಘಟನೆ ಕುರಿತು ಸಂಬಂಧಪಟ್ಟ ಇಲಾಖೆ ತಕ್ಷಣ ತನಿಖೆ ಆರಂಭಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತನಿಖೆಗೆ ಉ.ಟಿ ಖಾದರ್ ಸೂಚನೆ
ನೇತ್ರಾವತಿ ನದಿಯ ದಡದಲ್ಲಿ ಆಧಾರ್ ಕಾರ್ಡ್‌ಗಳ ರಾಶಿಗಳು ಕಂಡುಬಂದಿದ್ದು, ದತ್ತಾಂಶ ದುರುಪಯೋಗದ ಘಟನೆಗೆ ಸಂಬಂಧಿಸಿದಂತೆ ,ಕರ್ನಾಟಕ.ಸ್ಪೀಕರ್ ಯು.ಟಿ. ಖಾದರ್ ಅವರು ಯುಐಡಿಎಐ (UIDAI) ಯೋಜನಾ ವ್ಯವಸ್ಥಾಪಕರಿಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
“ಈ ಬಗ್ಗೆ ಸ್ಥಳೀಯ ಶಾಸಕನಾದ ನನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಧಾರ್ ಕಾರ್ಡ್‌ ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು?. ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಅಗತ್ಯ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.

Share This Article
Leave a Comment