ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಆನೆ ಹಾವಳಿಯಿಂದ ಮುಕ್ತಿ,ನೆರವಿಗೆ ಬರಲಿದೆ ಎಲಿಫೆಂಟ್ ಟಾಸ್ಕ್ ಫೋರ್ಸ್: ಶಾಸಕ ಕಿಶೋರ್ ಕುಮಾರ್ ಪುತ್ತೂರು

Prakhara News
1 Min Read

ಪುತ್ತೂರು, ಬೆಳ್ತಂಗಡಿ ಭಾಗದ ಕೃಷಿಕರ ನಿದ್ದೆಗೆಡಿಸಿದ್ದ ಕಾಡಾನೆ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರವು ಪ್ರತ್ಯೇಕ ‘ಆನೆ ಕಾರ್ಯಪಡೆ’ (Elephant Task Force) ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ವಿಧಾನ ಪರಿಷತ್ ಶಾಸಕ ಶ್ರೀ ಕಿಶೋರ್ ಕುಮಾ‌ರ್ ಪುತ್ತೂರು ಸದನದ ಒಳಗೂ ಹೊರಗೂ ನಡೆಸಿದ ಹೋರಾಟಕ್ಕೆ ಈ ಮೂಲಕ ಬೃಹತ್ ಯಶಸ್ಸು ಲಭಿಸಿದೆ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತ್ವರಿತ ಕಾರ್ಯಾಚರಣೆಗೆ ಬಲ
ಈ ಹಿಂದೆ ಕಾಡಾನೆಗಳು ದಾಳಿ ಮಾಡಿದಾಗಕಾರ್ಯಾಚರಣೆ ನಡೆಸಲು ಮಡಿಕೇರಿಯಿಂದ ಟಾಸ್ಕ್ ಫೋರ್ಸ್ ತಂಡ ಬರಬೇಕಿತ್ತು. ಇದರಿಂದಾಗಿ ಸಮಯ ವ್ಯರ್ಥವಾಗಿ ಬೆಳೆ ಹಾನಿ ಹೆಚ್ಚಾಗುತ್ತಿತ್ತು. ಆದರೆ ಹೊಸ ಆದೇಶದನ್ವಯ ಸುಳ್ಯವನ್ನು ಈ ಕಾರ್ಯಪಡೆಯ ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದೆ. ಉಪ್ಪಿನಂಗಡಿ,ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು
ಸುಬ್ರಹ್ಮಣ್ಯ ವಲಯಗಳು ವ್ಯಾಪ್ತಿಯಲ್ಲಿ ಬರಲಿದೆ. ಒಬ್ಬ
ಉಪ ವಲಯ ಅರಣ್ಯಾಧಿಕಾರಿ, ಇಬ್ಬರು ಗಸ್ತು ಅರಣ್ಯ ಪಾಲಕರು ಹಾಗೂ 25 ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಒಟ್ಟು 28 ಮಂದಿಯ ತಂಡ ಸನ್ನದ್ಧವಾಗಿರಲಿದ್ದು, ತ್ವರಿತ ಚಲನೆಗಾಗಿ 3 ಬೊಲೆರೊ ಜೀಪ್ ಹಾಗೂ 2 ಕ್ಯಾಂಟ‌ರ್ ವಾಹನಗಳನ್ನು ಒದಗಿಸಲಾಗಿದೆ.

ಆನೆಗಳನ್ನು ಹಿಮ್ಮೆಟ್ಟಿಸಲು ಬೇಕಾದ ವಾಕಿ-ಟಾಕಿ, ಬಂದೂಕು ಹಾಗೂ ಪಟಾಕಿಗಳಂತಹ ಆಧುನಿಕ ಸಲಕರಣೆಗಳೊಂದಿಗೆ ಸುಳ್ಯದಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪನೆಯಾಗಲಿದೆ. ಇದರಿಂದ ರೈತರು ಆನೆ ಹಾವಳಿಯ ಮಾಹಿತಿ ನೀಡಿದ ತಕ್ಷಣವೇ ತಂಡ ಸ್ಥಳಕ್ಕೆ ಧಾವಿಸಲು ಸಾಧ್ಯವಾಗುತ್ತದೆ.

“ಕರಾವಳಿ ರೈತರ ಹಿತರಕ್ಷಣೆಯೇ ನನ್ನ ಮೊದಲ ಆದ್ಯತೆ. ಸರ್ಕಾರಕ್ಕೆ ಸತತ ಒತ್ತಡ ಹೇರಿದ ಫಲವಾಗಿ ಇಂದು ಆನೆ ಕಾರ್ಯಪಡೆ ಮಂಜೂರಾಗಿದೆ.ಶೀಘ್ರದಲ್ಲೇ ಈ ತಂಡವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿ ಕೃಷಿಕರ ನೆರವಿಗೆ ಧಾವಿಸಲಿದೆ ಎಂದು ಕಿಶೋರ್ ಕುಮಾ‌ರ್ ಪುತ್ತೂರು ತಿಳಿಸಿದ್ದಾರೆ.

Share This Article
Leave a Comment