ಹಿರಿಯ ಕಾಂಗ್ರೆಸ್ ನಾಯಕ, ಪುಣೆಯ ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (Suresh Kalmadi) ಅವರು ಇಂದು ಮಂಗಳವಾರ ಬೆಳಿಗ್ಗೆ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ದೀರ್ಘಕಾಲದ ಅನಾರೋಗ್ಯದಿಂದ (Health Issue) ಬಳಲುತ್ತಿದ್ದ ಅವರು ಪುಣೆಯ ದೀನನಾಥ್ ಮಂಗೇಶ್ಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.


ಕುಟುಂಬ ಮೂಲಗಳ ಪ್ರಕಾರ, ಅವರ ಪಾರ್ಥಿವ ಶರೀರವನ್ನು ಎರಂಡವಾನೆಯ ಕಲ್ಮಾಡಿ ಹೌಸ್ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅಂತ್ಯದರ್ಶನಕ್ಕೆ ಇರಿಸಲಾಗುವುದು. ಅಂತ್ಯಕ್ರಿಯೆಯನ್ನು ಸಂಜೆ 3:30ಕ್ಕೆ ನವಿ ಪೇಠದ ವೈಕುಂಠ ಚಿತಾಗಾರದಲ್ಲಿ ನಡೆಸಲಾಗುವುದು ಎಂದು ಕುಟುಂಬ ತಿಳಿಸಿದೆ. ಅವರು ಪತ್ನಿ, ಮಗ-ಸೊಸೆ, ಇಬ್ಬರು ವಿವಾಹಿತ ಹೆಣ್ಣುಮಕ್ಕಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೇ 1, 1944ರಂದು ಜನಿಸಿದ ಸುರೇಶ್ ಕಲ್ಮಾಡಿ ಅವರು ರಾಜಕೀಯಕ್ಕೆ ಬರುವ ಮೊದಲು ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಆರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. 1974ರಲ್ಲಿ ವಾಯುಪಡೆಯಿಂದ ನಿವೃತ್ತರಾದ ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿ ರಾಜಕೀಯ ಜೀವನ ಆರಂಭಿಸಿದರು. ಪುಣೆಯಿಂದ ದೀರ್ಘಕಾಲ ಸಂಸದರಾಗಿದ್ದ ಅವರು ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ರಾಜ್ಯ ಸಚಿವರಾಗಿದ್ದಾಗ ರೈಲ್ವೆ ಬಜೆಟ್ ಮಂಡಿಸಿದ ಏಕೈಕ ವ್ಯಕ್ತಿ ಎಂಬ ದಾಖಲೆ ಅವರ ಹೆಸರಿನಲ್ಲಿದೆ.

