ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮಗು ಜನಿಸಿದ ನಂತರ ಮದುವೆಗೆ ನಿರಾಕರಿಸಿದ ಯುವಕ ಕೃಷ್ಣ ರಾವ್ ಮದುವೆಯಾಗಲು ತಪ್ಪಿದ್ದಲ್ಲಿ ಆತನ ಮನೆ ಮುಂದೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನ್ಯಾಯಕ್ಕಾಗಿ ಧರಣಿ ನಡೆಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಎಚ್ಚರಿಸಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ರಾವ್ ಒಪ್ಪಿದಲ್ಲಿ ಆತನ ಜೊತೆ ಯುವತಿಯ ವಿವಾಹವನ್ನು ನಾನೇ ಸ್ವಂತ ಖರ್ಚಿನಲ್ಲಿ ಮಾಡಿಸುತ್ತೇನೆ. ಪ್ರೀತಿ, ಪ್ರೇಮದ ಹೆಸರಲ್ಲಿ ಲೈಂಗಿಕ ಚಟುವಟಿಕೆ ನಡೆಸಿ, ಬಳಿಕ ಅರ್ಧದಲ್ಲೇ ಕೈಬಿಡುವ ಘಟನೆಗಳು ಮರುಕಳಿಸಬಾರದು.
ಇದೊಂದು ಜಿಲ್ಲೆಗೆ ಕಪ್ಪು ಚುಕ್ಕೆ. ಹಾಗಾಗಿ ಈ ಘಟನೆ ಪ್ರೀತಿಸಿ, ಮಗು ಕರುಣಿಸಿ ಯುವತಿಯ ಬಾಳನ್ನು ಅರ್ಧಕ್ಕೇ ಕೈಬಿಡುವವರಿಗೆ ಒಂದು ಪಾಠವಾಗಬೇಕು ಎಂದರು.
ಸದ್ಯ ಜಾಮೀನಿನಲ್ಲಿರುವ ಕೃಷ್ಣ ರಾವ್ ಕೋರ್ಟ್ ನಲ್ಲಿ ವಿಚಾರಣೆ ವೇಳೆ ನೀಡುವ ಹೇಳಿಕೆಯನ್ನು ಆಧರಿಸಿ ಮುಂದೆ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು. ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಪ್ರತಿಭಾ ಕುಳಾಯಿ ಹೇಳಿದರು.
