ಮಂಗಳೂರು : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಅದನ್ನು ಹರಿಬಿಟ್ಟ ಪ್ರಕರಣ ಆಘಾತಕಾರಿ ಪ್ರಕರಣ ಬಜಪೆಯಲ್ಲಿ ಸಂಭವಿಸಿದ್ದು, ಈ ಸಂಬಂಧ ಏಳು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪರಿಚಿತಳಾದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೇಮಿಸುವ ನೆಪದಲ್ಲಿ ಅತ್ಯಾಚಾರ ಎಸಗಲಾಗಿದೆ ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ಕಾರ್ತಿಕ್, ರಾಕೇಶ್ ಸಲ್ಡಾನ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಎಂದು ಗುರುತಿಲಾಗಿದೆ. ಅಪ್ರಾಪ್ತ ವಯಸ್ಸಿನ ಇನ್ನೋರ್ವ ಯುವಕನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.


ಗುರುಪುರ ಕೈಕಂಬದ ಕಿನ್ನಿಕಂಬಳ ಬಳಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಕಾರ್ತಿಕ್ ಎಂಬಾತ ಪರಿಚಯವಾಗಿದ್ದ. ಇನ್ಸ್ಟಾಗ್ರಾಂನಲ್ಲಿ ಮಾತನಾಡುತ್ತಿದ್ದ ಪರಿಚಯ ಪ್ರೀತಿಗೆ ತಿರುಗಿತ್ತು. 2025ರ ಜೂನ್ ತಿಂಗಳ ಕೊನೆಯ ಶನಿವಾರ ಮಧ್ಯಾಹ್ನ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರ್ತಿಕ್ ತನ್ನ ಸ್ಕೂಟರ್ನಲ್ಲಿ ವಳಚ್ವಿಲ್ನ ಹೋಟೆಲ್ಗೆ ಕರೆದೊಯ್ದು ಅಲ್ಲಿ ಊಟ ಮಾಡಿ ಬಳಿಕ ಅಡ್ಯಾರ್ ಫಾಲ್ಸ್ ಬಳಿಯಿರುವ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ವೇಳೆ ಕಾರ್ತಿಕ್ನ ಸ್ನೇಹಿತ ರಾಕೇಶ್ ಸಲ್ಡಾನ ಕೂಡ ಅತ್ಯಾಚಾರ ಎಸಗಿದ್ದ. ರಾಕೇಶ್ ಸಲ್ಡಾನ ಅತ್ಯಾಚಾರ ಎಸಗುತ್ತಿದ್ದ ವೇಳೆ ಕಾರ್ತಿಕ್ ಅದನ್ನು ವೀಡಿಯೊ ಮಾಡಿಕೊಂಡು ಆತನ ಸ್ನೇಹಿತರಿಗೆ ಕಳುಹಿಸಿದ್ದ ಎಂದು ಬಾಲಕಿ ಆ.16ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಬಾಲಕಿಯ ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸರು ಪೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಕಾರ್ತಿಕ್ ಮತ್ತು ರಾಕೇಶ್ ಸಲ್ಡಾನ, ವೀಡಿಯೊ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಎಂಬವರನ್ನು ಬಂಧಿಸಿದ್ದು, ಅಪ್ರಾಪ್ತ ಬಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲನನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
