ಕೋಟ್ಯಾಂತರ ರೂಪಾಯಿ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಅವರ ಬೆಂಗಳೂರು ಹಾಗೂ ಮಂಡ್ಯ ನಿವಾಸ ಮತ್ತು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲ (ED)ಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.



ಬೆಂಗಳೂರಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರ ಮನೆ ಹಾಗೂ ಐಶ್ವರ್ಯ ಅವರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಮತ್ತು ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ.


ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಹಲವು ದಾಖಲೆಗಳ ಶೋಧ ಮಾಡಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಐಶ್ವರ್ಯ ಗೌಡ ಅವರನ್ನು ಇಡಿ ವಶಕ್ಕೆ ಪಡೆದಿದೆ.
ಐಶ್ವರ್ಯ ಗೌಡ ಅವರು ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚಿಸಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜಿ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ.