ಮಂಗಳೂರು: ಕರಾವಳಿಯ ಅದ್ಭುತ ಪ್ರತಿಭೆ, ಖಳನಾಯಕ, ಸ್ತ್ರೀ ವೇಷ, ಹಾಸ್ಯ ಹೀಗೆ ಹದಿನೆಂಟಕ್ಕೂ ಅಧಿಕ ನಾಟಕಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತುಳು ರಂಗಭೂಮಿಯ ಹೆಸರಾಂತ ಕಲಾವಿದ ಸುರೇಶ್ ವಿಟ್ಲ ಅವರು ನಿಧನರಾಗಿದ್ದಾರೆ.



ಇವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಅವರು ಅಸುನೀಗಿದ್ದಾರೆ. ಇವರು ಪತ್ನಿ ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.


ಮಂಜೇಶ್ವರ ಶಾರದಾ ಆರ್ಟ್ಸ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡಿದ್ದ ಸುರೇಶ್ ವಿಟ್ಲ ಅವರ ಸಾವಿಗೆ ಕಲಾಭಿಮಾನಿಗಳು, ಮನೆಯವರು, ಸಹ ಕಲಾವಿದರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.