ಮುಲ್ಕಿ ಕಾರ್ನಾಡ್ ಮೂಲದ ಹಣ ಪಡೆದು ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ/ಇಂಜಿನಿಯರನಿಗೆ ರೂ. 2..47 ಲಕ್ಷ ದಂಡದೊಂದಿಗೆ ಪರಿಹಾರ ನೀಡಲು ಇಲ್ಲಿಯ ದ. ಕ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.



ಮುಲ್ಕಿ ಕಾರ್ನಾಡ್ ನಿವಾಸಿ ಎಂ.ಬಿ. ಖಾನ್ ಮನೆ ಕಟ್ಟಿಕೊಡುವಂತೆ ಸ್ಕೈ ಲೈನ್ ಅಸೋಸಿಯೇಟ್ಸ್ ನ ಸಾದಿಕ್ ಅಲಿ ಅವರ ಜೊತೆ 2022ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದ ಪ್ರಕಾರ ದೂರುದಾರ 1,441 ಚ.ಅಡಿ ಮನೆ ಕಟ್ಟಿಕೊಡಲು ರೂ. 20 ಲಕ್ಷ ಹಣ ಗುತ್ತಿಗೆದಾರನಿಗೆ ಕೊಡುವ ಕರಾರು ಇತ್ತು. ದೂರುದಾರ 14.50ಲಕ್ಷ ಮನೆ ಕಟ್ಟುವ ಕುರಿತು ಎದುರುದಾರರಿಗೆ ಸಂದಾಯ ಮಾಡಿದ್ದರು.
ಗುತ್ತಿಗೆದಾರ ಛಾವಣಿ ತನಕ ನಿರ್ಮಾಣ ಕಾರ್ಯ ನಿರ್ವಹಿಸಿ, ಸಾಮಗ್ರಿಗಳ ಬೆಲೆ ಏರಿಕೆ ಆಗಿದೆ ಎಂದು ಕೆಲಸವನ್ನು ಅರ್ಧದಲ್ಲಿ ನಿಲ್ಲಿಸಿ ಹೆಚ್ಚಿಗೆ ರೂ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮನೆ ಕೆಲಸ ಪೂರ್ತಿಗೊಳಿಸದ ಕಾರಣ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ ಎಂದು ಎಂ. ಬಿ ಖಾನ್ ಜಿಲ್ಲಾ ಗ್ರಾಹಕರ ಆಯೋಗಕ್ಕೆ ವಕೀಲರ ಮೂಲಕ ದೂರು ಸಲ್ಲಿಸಿದ್ದರು.


ದೂರಿನ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ ಹಂಡಿಗೋಳ್ ಹಾಗೂ ಸದಸ್ಯರಾದ ಶಾರದಮ್ಮ ಎಚ್ ಜಿ ಯವರು ಉಭಯತರ ಹಾಜರು ಮಾಡಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಆದೇಶ ನೀಡಿರುತ್ತಾರೆ.
ದೂರುದಾರ ಗುತ್ತಿಗೆದಾರನಿಗೆ .14.50 ಲಕ್ಷ ಸಂದಾಯ ಮಾಡಿದ್ದರೂ ಅವರು ಮನೆ ಕೆಲಸ ಪೂರ್ತಿಗೊಳಿಸದೆ ಮತ್ತು ಅರ್ಧದಲ್ಲಿ ಮನೆ ಕೆಲಸ ನಿಲ್ಲಿಸಿದರಿಂದ ಗುತ್ತಿಗೆದಾರ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಅದಕ್ಕಾಗಿ ಗುತ್ತಿಗೆದಾರ ದೂರುದಾರನಿಗೆ ಕೊಡಬೇಕಾದ ಹಣ, ಅವರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಹಾಗೂ ಪ್ರಕರಣದ ಖರ್ಚು ವೆಚ್ಚವೆಂದು ರೂ. 2.47 ಲಕ್ಷವನ್ನು ಪಾವತಿಸಬೇಕೆಂದು ತೀರ್ಪು ನೀಡಿದೆ, ಈ ಹಣವನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ಅವಧಿಯೊಳಗೆ ಹಣ ಕೊಡದಿದ್ದಲ್ಲಿ ತೀರ್ಪು ನೀಡಿದ ದಿನಾಂಕದಿಂದ .ರೂ. 2.47. ಲಕ್ಷ ಮೇಲೆ ಶೇ.8ರಂತೆ ಬಡ್ಡಿ ಹಾಕಿ ಕೊಡಲು ಆಯೋಗ ತಿಳಿಸಿದೆ.
ದೂರುದಾರರ ಪರವಾಗಿ ಮಂಗಳೂರಿನ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ಇದರ ವಕೀಲರಾದ ಒಮರ್ ಫಾರೂಕ್ ಮುಲ್ಕಿ, ಅಯಾಜ್ ಚಾರ್ಮಾಡಿ, ರಿಫಾಜ್ ಬೆಂಗರೆ ವಾದಿಸಿದರು.