Home ಕರಾವಳಿ ʼಶಿರಾಡಿ ಘಾಟಿ ಸೇರಿ ಮಂಗಳೂರು-ಬೆಂಗಳೂರು ಕಾರಿಡಾರ್‌ ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲು ಮನವಿʼ

ʼಶಿರಾಡಿ ಘಾಟಿ ಸೇರಿ ಮಂಗಳೂರು-ಬೆಂಗಳೂರು ಕಾರಿಡಾರ್‌ ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲು ಮನವಿʼ

0

ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರ್‌ ಅವರನ್ನು ಭೇಟಿಯಾಗಿ ಶಿರಾಡಿ ಘಾಟಿ ಬೈಪಾಸ್‌ ಯೋಜನೆ ಅನುಷ್ಠಾನ ಸೇರಿ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಪರ್ಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ತಮ್ಮ ಈ ಭೇಟಿ ವೇಳೆ ಕ್ಯಾ. ಚೌಟ ಅವರು ಮಂಗಳೂರು-ಬೆಂಗಳೂರು ಹೆದ್ದಾರಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರದ ಹಂತದಲ್ಲಿ ಇಲಾಖಾಧಿಕಾರಿಗಳಿಂದ ಆಗುತ್ತಿರುವ ವಿಳಂಬಕ್ಕೆ ತುರ್ತಾಗಿ ಮಧ್ಯಪ್ರವೇಶ ಮಾಡಿ ಎದುರಾಗಿರುವ ಎಲ್ಲ ಅಡೆ-ತಡೆ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ. ಅದರಲ್ಲಿಯೂ ಶಿರಾಡಿ ಘಾಟಿ ಮಾರ್ಗವನ್ನು ಮೇಲ್ದರ್ಜೆಗೇರಿಸುವಲ್ಲಿ ಸೂಕ್ತ ಪಥಗಳ ನಿಗದಿ ಹಾಗೂ ಯೋಜನೆಗೆ ಅರಣ್ಯ ಇಲಾಖೆಯ ಮಂಜೂರಾತಿ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಮನವಿ ಮಾಡಿದ್ದಾರೆ.

ಶಿರಾಡಿ ಘಾಟಿಯಲ್ಲಿ ಬಹುಪಥಗಳ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ನೀಡುವ ಪ್ರಕ್ರಿಯೆ ನಿಧಾನವಾಗಿರುವ ಕಾರಣ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಪ್ರಮುಖವಾಗಿ ಕರ್ನಾಟಕ ಸರ್ಕಾರದಿಂದ ಅರಣ್ಯ ಇಲಾಖೆಯ ಅನುಮತಿ ಬಾಕಿಯಿರುವ ಕಾರಣ ಈ ಯೋಜನೆ ಕಾರ್ಯರೂಪಕ್ಕೆ ತರುವುದಕ್ಕೆ ಹೆಚ್ಚಿನ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಶಿರಾಡಿ ಘಾಟಿ ರಸ್ತೆ ವಿಸ್ತರಣೆಗೆ ರಾಜ್ಯ ಸರ್ಕಾರದ ಕಡೆಯಿಂದ ಎದುರಾಗಿರುವ ಅಡೆ-ತಡೆ ನಿವಾರಣೆಗೆ ಹೆದ್ದಾರಿ ಸಚಿವಾಲಯದ ಕಡೆಯಿಂದ ಮಧ್ಯಸ್ಥಿಕೆ ವಹಿಸುವಂತೆಯೂ ಕ್ಯಾ. ಚೌಟ ಅವರು ಸಚಿವ ಗಡ್ಕರಿ ಅವರಲ್ಲಿ ವಿನಂತಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸದರು, ಸಚಿವರೊಂದಿಗೆ ದಕ್ಷಿಣ ಕನ್ನಡದ ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿಗಳು ಹಾಗೂ ಮಂಗಳೂರು-ಬೆಂಗಳೂರು ಕಾರಿಡಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಿದ್ಧಪಡಿಸುವ ಪ್ರಕ್ರಿಯೆಗಳ ಪ್ರಗತಿ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಈ ವೇಳೆ ಪ್ರಕ್ರಿಯಿಸಿರುವ ಸಚಿವ ನಿತಿನ್‌ ಗಡ್ಕರಿ ಅವರು, ಶಿರಾಡಿ ಘಾಟಿ ಹೆದ್ದಾರಿ ಮೇಲ್ದರ್ಜೆಗೇರಿಸುವುದಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಅನುಮತಿ ಹಾಗೂ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮುಂದಿನ ಹಂತದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಸಚಿವರ ಭೇಟಿ ಬಳಿಕ ಪ್ರಕ್ರಿಯಿಸಿರುವ ಸಂಸದ ಕ್ಯಾ. ಚೌಟ, ಮಂಗಳೂರು-ಬೆಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಸುಗಮಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ ಬಹಳ ಜರೂರಾಗಿ ಆಗಬೇಕಾಗಿರುವ ಈ ಶಿರಾಡಿ ಘಾಟಿ ಯೋಜನೆ ಬಾಕಿಯಿರುವ ಆಡಳಿತಾತ್ಮಕ ಅನುಮತಿಗಳನ್ನು ಆದಷ್ಟು ಬೇಗ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಈ ಯೋಜನೆ ಪೂರ್ಣಗೊಂಡರೆ, ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು, ಕೈಗಾರಿಕೆಗಳ ಅಭಿವೃದ್ಧಿಯ ಜತೆಗೆ ಔದ್ಯೋಗಿಕವಾಗಿ ಮತ್ತು ಆರ್ಥಿಕ ಬೆಳವಣಿಗೆಗೂ ಕರಾವಳಿ-ಮಲೆನಾಡು ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ.

ಶಿರಾಡಿ ಘಾಟಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಕ್ಯಾ. ಚೌಟ ಅವರು ನಿರಂತರ ಫಾಲೋಅಪ್‌ ಮಾಡುತ್ತಿದ್ದು, ಸಂಸದರಾದ ಬಳಿಕ ಕಳೆದ ಜುಲೈನಲ್ಲಿ ನಡೆದ ಪ್ರಥಮ ಅಧಿವೇಶನದಲ್ಲೇ ಡಿಪಿಆರ್‌ ತಯಾರಿ ವಿಚಾರವಾಗಿ ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿಯಾಗಿದ್ದರು. ಅಲ್ಲದೆ ಬಾಕಿಯಿರುವ ಆಡಳಿತಾತ್ಮಕ ಅನುಮತಿ ಮಂಜೂರು ಮಾಡುವಂತೆ 2024ರ ಅಕ್ಟೋಬರ್‌ನಲ್ಲಿ ಕರ್ನಾಟಕದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್‌ ಅವರಿಗೂ ಪತ್ರ ಬರೆದಿದ್ದರು. ಇತ್ತೀಚೆಗೆ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಈ ವಿಚಾರವನ್ನು ಗಮನಕ್ಕೆ ತಂದು ಮಂಜೂರಾತಿಗೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು.

LEAVE A REPLY

Please enter your comment!
Please enter your name here