Home ತಾಜಾ ಸುದ್ದಿ ರನ್ಯಾ ಚಿನ್ನ ಸಾಗಣೆ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶ

ರನ್ಯಾ ಚಿನ್ನ ಸಾಗಣೆ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶ

0

ಬೆಂಗಳೂರು: ನಟಿ ರನ್ಯಾ ರಾವ್ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ್ದ ಪ್ರಕರಣ ಸಂಬಂಧ ಇದೀಗ ಆಕೆಯ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಸಂಕಷ್ಟ ಎದುರಾಗಿದೆ. ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ.

ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ. ನಟಿ ರನ್ಯಾ ಚಿನ್ನ ಸಾಗಣೆ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು.

ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿ ನೇಮಿಸಲಾಗಿದೆ. ಇವರು ತಕ್ಷಣ ತನಿಖೆ ಪ್ರಾರಂಭಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕಿದೆ. ಪ್ರಕರಣ ಸಂಬಂಧ ಉದ್ಯಮಿ ಪುತ್ರ ತರುಣ್ ರಾಜು ಎಂಬುವರನ್ನು ಡಿಆರ್‌ಐ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ, ವಿಧಾನಸಭೆ ಕಲಾಪದಲ್ಲಿಯೂ ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ ಭಾರೀ ಸದ್ದು ಮಾಡಿದೆ. ರಾಜಕಾರಣಿಗಳ ಕೈವಾಡದ ಆರೋಪ, ಪ್ರಭಾವಿ ವ್ಯಕ್ತಿಗಳು ರನ್ಯಾ ಹಿಂದಿರುವ ಅನುಮಾನಗಳು ರಾಜಕೀಯವಾಗಿಯೂ ಪ್ರಕರಣ ಸದ್ದು ಮಾಡುವಂತೆ ಮಾಡಿದೆ. ಹೀಗಾಗಿ ಗೃಹ ಇಲಾಖೆ ರಾಮಚಂದ್ರ ರಾವ್ ಬಗ್ಗೆಯೂ ತನಿಖೆಗೆ ಆದೇಶಿಸಿದೆ.

ಚಿನ್ನ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲುಪಾಲಾಗಿರುವ ರನ್ಯಾ ರಾವ್ ವಿಚಾರದಲ್ಲಿ ಶಿಷ್ಟಾಚಾರ ದರ್ಬಳಕೆಯಾಗಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ಡಿಸಿಪಿ ಸುಚಿತ್ ವರದಿ ಸಲ್ಲಿಸಿದ್ದಾರೆ. ರನ್ಯಾ ಬಂಧನಕ್ಕೊಳಗಾದ ದಿನ ಶಿಷ್ಟಾಚಾರ ನಿರ್ವಹಿಸುತ್ತಿದ್ದ ಕಾನ್‌ಸ್ಟೇಬಲ್ ಬಸವರಾಜ್ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದುಬೈನಿಂದ ಬರುವಾಗಲೇ ಕಾನ್‌ಸ್ಟೇಬಲ್‌ ಬಸವರಾಜ್‌ಗೆ ರನ್ಯಾ ಕರೆ ಮಾಡಿದ್ದಾರೆ.

ಟರ್ಮಿನಲ್‌ 1ಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ವೇಳೆ, ‘ಇಲ್ಲ ಮೇಡಂ, ಬೇರೆ ಅಫೀಸರ್‌ ಬರುತ್ತಿದ್ದಾರೆ ಅವರನ್ನು ರಿಸೀವ್ ಮಾಡಿಕೊಳ್ಳಬೇಕು’ ಎಂದು ಬಸವರಾಜ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರನ್ಯಾ, ‘ನೀವೇ ಬರಬೇಕು. ಇಲ್ಲಾಂದ್ರೆ ಅಪ್ಪಾಜಿಗೆ ಹೇಳುತ್ತೇನೆ’ ಎಂದು ಬೆದರಿಸಿದ್ದರು. ಈ ವಿಚಾರವನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here