Home ಕರಾವಳಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ..!! ಪೋಲೀಸ್ ತನಿಖೆಯಲ್ಲಿ ದಿಗಂತ್ ಹೇಳಿದ್ದೆನು??

ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ..!! ಪೋಲೀಸ್ ತನಿಖೆಯಲ್ಲಿ ದಿಗಂತ್ ಹೇಳಿದ್ದೆನು??

0

ಬಂಟ್ವಾಳ : ತಾಲೂಕಿನ ಫರಂಗಿಪೇಟೆಯ ಎಳೆ ಪ್ರಾಯದ ಹುಡುಗ ದಿಗಂತ್ ಹಲವು ದಿನಗಳಿಂದ ನಾಪತ್ತೆಯಾಗಿ ಇದೀಗ ದಿಢೀರ್ ಪತ್ತೆಯಾಗಿದ್ದಾನೆ. ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಎಲ್ಲರಿಗೂ ಪ್ರಶ್ನಾರ್ಥಕವಾಗಿ ಕಾಡಿದ್ದ ಈ ಹುಡುಗ ಇಷ್ಟು ದಿನಗಳ ಕಾಲ ಎಲ್ಲಿದ್ದ, ಏನು‌‌ ಮಾಡ್ತಾ ಇದ್ದ, ಅಷ್ಟಕ್ಕೂ ಅವನು ನಾಪತ್ತೆಯಾಗಿದ್ದಾದರೂ ಯಾಕೆ ನೂರಾರು ಪ್ರಶ್ನೆಗಳಿವೆ.

ಬಾಲಿವುಡ್ ಚಿತ್ರದಂತೆ ಅತಿ ಕುತೂಹಲ ಮೂಡಿಸಿದ್ದ ಬಾಲಕ ದಿಗಂತ್‌ನ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ದಿಗಂತ್‌ನದ್ದು ಒಂದು ಕೂಡು ಕುಟುಂಬ. ಅವನು ತುಂಬಾ ಬುದ್ಧಿವಂತ ಹುಡುಗನಾಗಿದ್ದು, ಕ್ಲಾಸ್‌ ನಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದ ಎಂದು ತಿಳಿದುಬಂದಿದೆ. ಕೂಡು ಕುಟುಂಬವಾಗಿರುವುದರಿಂದ ದಿಗಂತ್ ಬಗ್ಗೆ ಅವನ ಪೋಷಕರು ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ ಎನ್ನಲಾಗಿದೆ. ಉತ್ತಮ ಅಂಕಗಳನ್ನು ಗಳಿಸಿ ಕ್ಲಾಸಿನಲ್ಲಿ ಹೆಸರು ಪಡೆದಿದ್ದ ಹುಡುಗ ದಿಗಂತ್ ಇದ್ದಕ್ಕಿದ್ದಂತೆ ವಿದ್ಯೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ತನ್ನ ಪಾಡಿಗೆ ತಾನು ಇರುತ್ತಿದ್ದ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಮೊಬೈಲ್ ಅಡಿಕ್ಟ್ ಆಗಿದ್ದ ದಿಗಂತ್ ಹೆತ್ತವರಿಂದಲೂ ಬೈಯ್ಸಿಕೊಂಡಿದ್ದ ಎನ್ನಲಾಗಿದೆ. ಮಾನಸಿಕವಾಗಿ ಜರ್ಜರಿತವಾಗಿದ್ದ ಹುಡುಗ ಪರಿಹಾರ ಕಾಣಲೆಂದು ಮನೆಯಿಂದ ದೂರವಾಗಿ ಎಲ್ಲಾದರೂ ನೆಲೆ ಕಾಣಬೇಕೆಂದು ಯೋಚಿಸಿ ಮನೆ ಬಿಟ್ಟು ನಾಪತ್ತೆಯಾದನೆಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಮನೆಯಿಂದ ಹೊರಬಂದ ದಿಗಂತ್ ರೈಲ್ವೆ ಹಳಿಗೆ ಬಂದಿದ್ದ ಎನ್ನಲಾಗಿದೆ. ನಡೆದಾಡುವಾಗ ಅವನ ಕಾಲಿಗೆ ಗಾಯವಾಗಿದ್ದು ಮುಂದೆ ಚಪ್ಪಲಿ ಹಾಕಿ ನಡೆಯಲಾಗದೆ ಒದ್ದಾಡುತ್ತಿದ್ದ. ಹೀಗಾಗಿ ತನ್ನ ಚಪ್ಪಲಿಯನ್ನು ಅಲ್ಲೇ ಬಿಟ್ಟು ಖಾಲಿ ಕಾಲ್ನಡಿಗೆಯಲ್ಲಿ ಸಂಚರಿಸಿದ ಎನ್ನಲಾಗಿದೆ.

ಇದೇ ರಕ್ತ ಮಿಶ್ರಿತ ಚಪ್ಪಲಿ ಊರವರಿಗೆ ಪತ್ತೆಯಾಗಿದ್ದು, ದಿಗಂತ್ ನಾಪತ್ತೆ ಹಿಂದೆ ನಿಗೂಢ ಸಂಶ‌ಯಗಳು ಹುಟ್ಟಲು ಕಾರಣವಾಗಿದೆ. ಅಲ್ಲದೆ ಹಿಂದೂ ಸಂಘಟನೆಗಳು ಕೂಡಾ ಪ್ರತಿಭಟನೆ ನಡೆಸಿದವು. ದಿಗಂತ್ ಪತ್ತೆಗಾಗಿ ಪೊಲೀಸರಲ್ಲಿ ಒತ್ತಡ ಹೇರಲಾಗುತ್ತಿತ್ತು. ಇದೆಲ್ಲದರ ಮಧ್ಯೆ ಹೀಗೆ ರೈಲ್ವೆ ಟ್ರ್ಯಾಕ್‌ ಮೂಲಕ ಸಾಗಿಬಂದ ಹುಡುಗ ದಿಗಂತ್ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಹತ್ತಿರದಲ್ಲಿ ಇರುವ ಮದುವೆ ಹಾಲ್‌ ಒಂದರ ಬಳಿಯಿಂದ ರಸ್ತೆಯಲ್ಲಿ ‌ಸಾಗುತ್ತಿದ್ದ ಬೈಕ್ ಒಂದರಲ್ಲಿ ಮಂಗಳೂರಿನ ಸ್ಟೇಟ್ ಬ್ಯಾಂಕ್‌ ತಲುಪಿದ್ದ ಎನ್ನಲಾಗಿದೆ.

ಅಲ್ಲಿ ಏನು ಮಾಡಬೇಕೆಂದು ತಿಳಿಯದ ಬಾಲಕ ನೇರವಾಗಿ ಶಿವಮೊಗ್ಗ ಬಸ್ ಹತ್ತಿದ್ದು, ಅಲ್ಲಿಂದ ಮೈಸೂರಿಗೆ ತೆರಳಿದ್ದ. ಖರ್ಚಿಗೆ ಮನೆಯಿಂದ ಕೊಂಚ ಹಣ ತಂದಿದ್ದ ದಿಗಂತ್ ಮೈಸೂರಿನಲ್ಲಿ ಬಟ್ಟೆ ಖರೀದಿಸಿ ಮೈಸೂರು ಸುತ್ತಾಡಿ ‌ನಂತರ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ರೈಲು ಹತ್ತಿ ಬೆಂಗಳೂರಿನ ಕೆಂಗೇರಿಯಲ್ಲಿ ಇಳಿದಿದ್ದಾನೆ. ಅಲ್ಲಿ ಹಾಳುಮೂಳು ತಿಂಡಿ ತಿಂದು ಹಸಿವು ನೀಗಿಸಿದ್ದ. ನಂತರ ನದಿಬೆಟ್ಟ ಸುತ್ತಿದ, ಆದರೆ ಅವನಲ್ಲಿ ಹಣವೆಲ್ಲಾ ಮುಗಿದಿತ್ತು. ನಂತರ ಬೆಂಗಳೂರಿನಲ್ಲಿ ದಿಗಂತ್ ಹಣ ಸಂಪಾದನೆಗಾಗಿ ರೆಸಾರ್ಟ್ ಒಂದಕ್ಕೆ ತೆರಳಿ ಕೆಲಸ ಕೊಡುವಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ‌. ಅವರು ಕೆಲಸ ಕೊಟ್ಟಿದ್ದು, ಅಲ್ಲಿ ಸುಮಾರು ಎರಡು ದಿನ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ರೆಸಾರ್ಟ್‌ನವರಿಂದ ಸುಮಾರು 500 ರೂ. ಪಡೆದುಕೊಂಡಿದ್ದ ದಿಗಂತ್ ಮತ್ತೆ ಮೈಸೂರಿಗೆ ಬಸ್ ಹತ್ತಿದ್ದಾನೆ ಎನ್ನಲಾಗಿದೆ‌. ಇದ್ದ ಹಣದಲ್ಲಿ ಊಟ ಮಾಡಿ ಅಲ್ಲಿ ಏನು ಮಾಡುವುದೆಂದು ತಿಳಿಯದೆ ನೇರವಾಗಿ ಮತ್ತೆ ಉಡುಪಿಗೆ ರೈಲು ಏರಿ ಬಂದಿದ್ದಾನೆ. ಈ ಮಧ್ಯೆ ರೈಲಿನಲ್ಲಿ ಬರುತ್ತಿರುವ ಸಮಯ ಈತ ನಾಪತ್ತೆಯಾದ‌ ಜಾಗದಲ್ಲಿ ಪೊಲೀಸರು ಹುಡುಕಾಟ ‌ನಡೆಸುತ್ತಿರುವುದನ್ನು ರೈಲಿನಲ್ಲಿ ಸಂಚರಿಸುವಾಗ ನೋಡಿಕೊಂಡೇ ಹೋಗಿದ್ದಾನೆ. ನಂತರ ಉಡುಪಿಯಲ್ಲಿ ಇಳಿದಿದ್ದಾನೆ ಎನ್ನಲಾಗಿದೆ. ಉಳಿದಿದ್ದ ಚಿಲ್ಲ‌ರೆ ಹಣದಲ್ಲಿ ಬಿಸ್ಕೆಟ್, ಚಾಕ್ಲೆಟ್, ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಡುಗನಿಗೆ ಹಣವೆಲ್ಲಾ ಮುಗಿದ ಮೇಲೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದ ಎನ್ನಲಾಗಿದೆ. ‌

ಮನೆಯಿಂದ ಹಾಕಿಕೊಂಡು ಬಂದಿದ್ದ ಡ್ರೆ‌ಸ್ ಮಾತ್ರವಲ್ಲದೇ ಈತ ಮೈಸೂರಿನಲ್ಲಿ ಖರೀದಿಸಿದ್ದ ಉಡುಗೆಯೂ ಹಳತಾಗಿದ್ದರಿಂದ ಹೊಸ ಬಟ್ಟೆ ಖರೀದಿಸಬೇಕೆಂದು ಚಿಂತಿಸಿದ್ದ ಎನ್ನಲಾಗಿದೆ. ಆದರೆ ಇವನ ಬಳಿ ಹಣ ಮುಗಿದಿದ್ದು ಅದಕ್ಕಾಗಿ ನೇರವಾಗಿ ಉಡುಪಿ ಯ ಡೀ ಮಾರ್ಟ್‌ ಗೆ ಬಂದಿದ್ದಾನೆ ಎನ್ನಲಾಗಿದೆ. ಡೀ ಮಾ‌ರ್ಟ್‌ನಲ್ಲಿ ಬಟ್ಟೆ ಖರೀದಿಸಿದ್ದ ಬಾಲಕನ ಬಳಿ ಪಾವತಿಸಲು ಹಣ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಅಲ್ಲಿಂದ ಓಡಿ ತಪ್ಪಿಸಲೆತ್ನಿಸಿದ ಹುಡುಗನನ್ನು ಗಮನಿಸಿದ ಡೀ ಮಾರ್ಟ್ ಸಿಬ್ಬಂದಿ ಹಿಡಿದಿಟ್ಟುಕೊಂಡರು ಎನ್ನಲಾಗಿದೆ. ಹುಡುಗನ ಮೇಲೆ ಸಂಶಯ ಬಂದಿದ್ದ ಡೀ ಮಾರ್ಟ್ ಉದ್ಯೋಗಿಯೋರ್ವ, ದಕ್ಷಿಣ ಕನ್ನಡದಲ್ಲಿ ದಿಗಂತ್ ನಾಪತ್ತೆಯಾದ ಸುದ್ದಿಯನ್ನು ಮೊದಲೇ ಗ್ರಹಿಸಿದ್ದ ಎನ್ನಲಾಗಿದೆ. ಅಲ್ಲದೆ ಹುಡುಗನ ಮನೆಯವರ ಫೋನ್ ನಂಬರನ್ನೂ ಪಡೆದ ಸಿಬ್ಬಂದಿ ಮನೆಯವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ‌.

ಮನೆ ಮಂದಿ ಬಂಟ್ವಾಳ ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ಇದೆಲ್ಲಾ ಮಾಹಿತಿ ಪ್ರಕರಣದ ತನಿಖಾಧಿಕಾರಿಗಳ ತಂಡಕ್ಕೆ ಲಭ್ಯವಾಗಿದೆ. ತಕ್ಷಣವೇ ಉಡುಪಿ ಪೊಲೀಸರಿಗೆ ಮಾಹಿತಿ‌ ತಿಳಿಸಿ, ಉಡುಪಿ ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಇಷ್ಟೆಲ್ಲಾ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಬ್ ಇನ್ಸ್ ಪೆಕ್ಟರ್‌ ನಂದಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ಜೊತೆ ನೇರವಾಗಿ ಉಡುಪಿಗೆ ತೆರಳಿದ್ದಾರೆ. ಇದೀಗ ಹುಡುಗನನ್ನು ಮಂಗಳೂರಿಗೆ ಕರೆದು ತಂದ ನಂತರ, ಎಸ್ಪಿ ಯತೀಶ್ ಅವರು ಬಾಲಕನನ್ನು ಮಾತನಾಡಿಸಿ ಆತನನಿಗೆ ಆಹಾರದ ವ್ಯವಸ್ಥೆ ಮಾಡಿ‌ ನಂತರ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿ, ಕಾನೂನು ಮುಖಾಂತರ ಕ್ರಮ ಕೈಗೊಳ್ಳಲಾಗಿದ್ದು, ಇದೀಗ ಬೊಂದೆಲ್‌ನ ಬಾಲಕರ ಕೇಂದ್ರಕ್ಕೆ ಕಳಿಸಲಾಗಿದೆ ಎನ್ನಲಾಗಿದೆ.

ಹುಡುಗ ದಿಗಂತ್ ಅತಿ ಬುದ್ದಿವಂತನಾಗಿದ್ದು, ಮನೆ ಮಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ. ಮೊಬೈಲ್ ಅಡಿಕ್ಟ್ ಆಗಿದ್ದ ಆತ ಇತ್ತೀಚೆಗೆ ಕಲಿಕೆಯ ಆಸಕ್ತಿಯನ್ನೂ ಕಳೆದುಕೊಂಡಿದ್ದ ಎನ್ನಲಾಗಿದೆ. ಇದರಿಂದ ಹೊರಬರಬೇಕೆಂದು ನಿರ್ಧರಿಸಿದ್ದ ದಿಗಂತ್ ಹೀಗೆ ಗೊತ್ತುಗುರಿ‌ ಇ‌ಲ್ಲದವನ ಹಾಗೆ ಸುತ್ತಾಡಿಕೊಂಡಿದ್ದ. ಕೊನೆಗೂ ದಕ್ಷಿಣ ಕನ್ನಡ ‌ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು‌ ಸಿಬ್ಬಂದಿಗಳು ಅನೇಕ‌‌ ದಿನಗಳಿಂದ ನಡೆಸಿದ ಎಲ್ಲಾ ಪ್ರಯತ್ನಕ್ಕೂ ಕಡೆಗೂ ಫಲ ಸಿಕ್ಕಿದೆ.

 

 

LEAVE A REPLY

Please enter your comment!
Please enter your name here