Home ಕರಾವಳಿ ಗರ್ಡಾಡಿ ಬೊಳಿಯಾರ್ ಫಾರ್ಮ್ಸ್ ಜಾಗದ ವಿಷಯಕ್ಕೆ ತಲೆ ಹಾಕಿದ ಪೊಲೀಸ್ ಪೇದೆಯ ತಲೆದಂಡ

ಗರ್ಡಾಡಿ ಬೊಳಿಯಾರ್ ಫಾರ್ಮ್ಸ್ ಜಾಗದ ವಿಷಯಕ್ಕೆ ತಲೆ ಹಾಕಿದ ಪೊಲೀಸ್ ಪೇದೆಯ ತಲೆದಂಡ

0

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಬೊಳಿಯಾರ್ ಫಾರ್ಮ್ಸ್ ನ ಜಾಗದ ವಿವಾದಕ್ಕೆ ಸಂಬಂಧಿಸಿದ ಕಳೆದ ವರ್ಷ ನಡೆದ ವಾಮಾಚಾರದ ಪ್ರಕರಣವು ಭಾರಿ ಸದ್ದು ಮಾಡಿದ್ದು ಈಗ ಜಾಗದ ವ್ಯಾಜ್ಯವು ರಾಜ್ಯ ಹೈ ಕೋರ್ಟ್ ನಲ್ಲಿ ನಡೆಯುತ್ತಿದೆ.
ಈ ಜಾಗವನ್ನು ಮಂಗಳೂರಿನ ರಾಜೇಶ್ ಪ್ರಭು ಎಂಬುವವರ ಪತ್ನಿ ಖರೀದಿಸಿ ತಮ್ಮ ಹೆಸರಿಗೆ ನೋಂದಾವಣೆ ಮಾಡಿದ ನಂತರ ಜಾಗದ ಮೊದಲ ಮಾಲಿಕ ಗೋಪಕುಮಾಾರ್ ಸ್ಥಳೀಯ ರಾಜಕೀಯ ನಾಯಕರು, ಅಕ್ರಮ ಮರಳು ವ್ಯಾಪಾರದ ಉದ್ಯಮಿಗಳು ಹಾಗೂ ಕೆಲವು ಭೂ ಮಾಫಿಯಾದ ಪುಂಡ ಪೋಕರಿಗಳೊಂದಿಗೆ ಸೇರಿ ಮತ್ತೆ ಹಣ ಲಪಟಾಯಿಸುವ ನೆಪದಲ್ಲಿ ಜಾಗಕ್ಕೆ ಕೋರ್ಟಿನಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶ ತಂದಿದ್ದರು.


ಈ ನಡುವೆ ಈ ಜಾಗದ ವಿಷಯಕ್ಕೆ ತಲೆ ಹಾಕಿದವರಲ್ಲಿ ಕೆಲವರು ಮೃತಪಟ್ಟಿದ್ದು ಇನ್ನು ಕೆಲವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಕಳೆದ ಬಾರಿ ನಾವು ವರದಿ ಮಾಡಿದ್ದು ಈಗ ಇಲ್ಲಿ ಪುನಃ ಅಧಿಕಪ್ರಸಂಗ ಮಾಡಲು ಹೋದ ಬೆಳ್ತಂಗಡಿ ಠಾಣೆಯ ಮುಖ್ಯ ಪೇದೆ ತಾನು ತೋಡಿದ ಗುಂಡಿಗೆ ತಾನೇ ಬಿದ್ದಿರುವ ಘಟನೆ ನಡೆದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಳನಿವೇಲು ಗರ್ಡಾಡಿ ಬೋಳಿಯಾರ್ ಫಾರ್ಮ್ಸ್ ಖರೀದಿಸಿದ್ದ ಮಂಗಳೂರಿನ ಉದ್ಯಮಿ ರಾಜೇಶ್ ಪ್ರಭು ರವರನ್ನು ಸಂಪರ್ಕಿಸಿ ಈಗ ಕೋರ್ಟ್ ನಲ್ಲಿ ನಡೆಯುತ್ತಿರುವ ವ್ಯಾಜ್ಯಕ್ಕೇ ಸಂಬಂಧಪಟ್ಟಂತೆ ನಿಮ್ಮನ್ನ ಭೇಟಿ ಮಾಡಿ ವಿಚಾರಣೆ ನಡೆಸಿ ಜಾಗದ ಕೇಸ್ ನ ವರದಿ ಸಲ್ಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದು ನಿಮ್ಮ ಮನೆಯ ಲೋಕೇಷನ್ ಕಳುಹಿಸಿ ನಾನು ಬರುತ್ತೇನೆ ಎಂದು ರಾಜೇಶ್ ರವರ ಮನೆಗೆ ಬಂದು ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಅವರಿಗೆ 2 ಲಕ್ಷ ರೂಪಾಯಿ ಹಣ ಕೊಡಬೇಕೆಂದು ತಿಳಿಸಿ ಪದೇ ಪದೇ ಕರೆ ಮಾಡಿ ಮಾನಸಿಕ ಹಿಂಸೆ ನೀಡಿ 50 ಸಾವಿರ ರೂಪಾಯಿಯನ್ನು ಪಡೆದುದಲ್ಲದೆ ಸ್ವಲ್ಪ ದಿನದ ನಂತರ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಟ್ ಇವರ ಪಾರ್ಟಿ ಇದ್ದು ಅದಕ್ಕೆ ಮಧ್ಯದ ವ್ಯವಸ್ಥೆ ಮಾಡಿಕೊಡಲು ಹೇಳಿ ಮಂಗಳೂರಿನ ವೈನ್ ಮಾರ್ಟ್ ನಲ್ಲಿ 22,470 ರೂಪಾಯಿಯ ಮದ್ಯ ಖರೀದಿಸಿದ ಬಿಲ್ಲನ್ನು ರಾಜೇಶ್ ರವರ ಕಡೆಯಿಂದ ಕೊಡಿಸಿದ್ದಾರೆ.
ಇಷ್ಟಕ್ಕೂ ಮುಗಿಯದ ಈತನ ಸುಲಿಗೆ ಗರ್ಡಾಡಿ ಬಳಿ ನಡೆಯುವ ಕೋಲದ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬ ಭಾಗವಹಿಸುವ ಸಂಧರ್ಬದಲ್ಲಿ ಗಲಾಟೆಯಾಗುವ ಲಕ್ಷಣವಿದ್ದು ತಮಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಮಗೆ ಜವಾಬ್ದಾರಿ ನೀಡಿದ್ದು ಅದಕ್ಕಾಗಿ 20 ಸಾವಿರ ರೂಪಾಯಿ ಹಣ ನೀಡಬೇಕುಂದು ಪಳನಿವೇಲು ಡಿಮಾಂಡ್ ಮಾಡಿದ್ದು ಅದಲ್ಲದೇ ಹಣದೊಂದಿಗೆ 5 ಸಾವಿರ ಬೆಲೆಯ ಮದ್ಯವನ್ನು ಕೂಡ ಪಡೆದುಕೊಂಡಿದ್ದ.


ಇಷ್ಟೆಲ್ಲಾ ನಡೆಯುತ್ತಿರುವಾಗ ರಾಜೇಶ್ ಪ್ರಭು ಅವರು ಈ ವರದಿಯ ಬಗ್ಗೆ ತಮ್ಮ ಹೈ ಕೋರ್ಟ್ ವಕೀಲರಲ್ಲಿ ಕೇಳಿದಾಗ ಇದನ್ನು ಮಾಹಿತಿ ಹಕ್ಕಿನಲ್ಲಿ ತೆಗೆಯಬೇಕು ಎಂದು ಸೂಚಿಸಿದಾಗ ಇದರ ಬಗ್ಗೆ ರಾಜೇಶ್ ರವರು ಬೆಳ್ತಂಗಡಿ ಹಾಗು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ವಿಚಾರಿಸಿದಾಗ ಈ ತರಹದ ಯಾವುದೇ ವರದಿ ಅಥವಾ ವಿಚಾರಣೆಯು ತನ್ನ ಬಗ್ಗೆ ನಡೆದಿರುವುದಿಲ್ಲ ಎಂದು ಗೊತ್ತಾಗಿರುತ್ತದೆ.
ಇದೆಲ್ಲ ಈ ಪೊಲೀಸ್ ಪೇದೆ ಪಳನಿ ವೇಲು ತನ್ನ ಜೇಬು ತುಂಬಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಉಪಾಧೀಕ್ಷಕರು ಹಾಗೂ ಬೆಳ್ತಂಗಡಿಯ ಪೊಲೀಸ್ ಠಾಣಾಧಿಕಾರಿಯವರ ಹೆಸರನ್ನು ದುರುಪಯೋಗಪಡಿಸಿಕೊಂಡ ವಿಷಯ ರಾಜೇಶ್ ಪ್ರಭು ಅವರಿಗೆ ತಿಳಿಯಿತು,
ಇದನ್ನೆಲ್ಲ ನೀವು ಇನ್ನು ನೀವು ವಿಚಾರಿಸಬೇಡಿ ಎಂದು ಪೊಲೀಸ್ ಪೇದೆ ರಾಜೇಶ್ ಪ್ರಭುರವರಿಗೆ ತಾಕೀತು ಮಾಡಿದ್ದು ಇದಕ್ಕೆ ಒಪ್ಪದ ರಾಜೇಶ್ ಪ್ರಭು ಇದರ ಬಗ್ಗೆ ಇನ್ನೂ ವಿಚಾರಿಸತೊಡಗಿದಾಗ ಫೆಬ್ರವರಿ 20 ರಿಂದ 21 ರ ಬೆಳಗ್ಗಿನ ಜಾವದ ತನಕ ನಿರಂತರ ಕರೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಒಡ್ಡಿದ್ದು , ನಿನ್ನ ಮಗನನ್ನು ನೀನೆ ಕೊಂದಿದ್ದು ಎಂದು ಆರೋಪಿಸಿ ಮಗನನ್ನು ಸಾಯಿಸಿದ ನೀನು ಬದುಕಲು ಯೋಗ್ಯನಲ್ಲ ಆತ್ಮಹತ್ಯೆ ಮಾಡಿಕೋ ಹೋಗು ಎಂದು ಪ್ರೇರೇಪಿಸಿ ಮಾನಸಿಕ ಹಿಂಸೆಯನ್ನು ನೀಡಿದ್ದಾನೆ ಅದಲ್ಲದೇ ಈ ಜಾಗದ ವ್ಯಾಜ್ಯದ ವಿಷಯದಲ್ಲಿ ನ್ಯಾಯ ನಿನ್ನ ಪರವಿದ್ದರೂ ನಾನು ಬಿಡುವುದಿಲ್ಲ ನಿನ್ನ ಎದುರಾಳಿ ಗೋಪಕುಮಾರ್ ಗೆ ಬೆಂಬಲ ನೀಡುವುದಾಗಿ ತಿಳಿಸಿ ನಿನಗೆ ಬೆಂಬಲ ನೀಡುವವರು ಯಾರೆ ಇರಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ,ಮಂತ್ರಿಗಳು ಯಾವುದೇ ಪೊಲೀಸ್ ಅಧಿಕಾರಿಯನ್ನು ನಾನು ಕೇರ್ ಮಾಡಲ್ಲ ನಿನ್ನ ಕೈ ಯಲ್ಲಿ ಏನು ಮಾಡಲು ಆಗುತ್ತೋ ಮಾಡು ಎಂದು ಹಿರಿಯ ಅಧಿಕಾರಿಗಳನ್ನೂ ಹಾಗೂ ರಾಜಕಾರಣಿಗಳನ್ನು ಕೂಡ ಈ ಪೇದೆ ನಿಂದಿಸಿದ್ದಾನೆ.

ಮರುದಿನವೇ ಈ ವಿಷಯದ ಬಗ್ಗೆ ರಾಜೇಶ್ ಪ್ರಭುರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಗೂ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರಿಗೆ ಸಾಕ್ಷಿ ಸಮೇತ ಪಳನಿ ವೇಲು ವಿರುದ್ಧ ದೂರು ನೀಡಿದ್ದು ಇದನ್ನೆಲ್ಲ ಪರಿಶೀಲಿಸಿದ ಅಧಿಕಾರಿಗಳು ಕೂಡಲೇ ಪಳನಿ ವೇಲು ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ.

ಇದೇನೂ ಹೊಸದಲ್ಲ ಪಳನಿ ವೇಲು ಮೇಲೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಈ ಮೊದಲು ಕೂಡ ಇಂತಹ ಹಣ ಸುಲಿಗೆ, ಹಲ್ಲೆ, ಬಾಲಕಿಗೆ ಕಾರಿನಲ್ಲಿ ಗುದ್ದಿದ ಪ್ರಕರಣ, NIA ಅಧಿಕಾರಿಗಳೊಂದಿಗೆ ಸೇರಿ ವಿಚಾರಣೆಯ ಸಂದರ್ಭದಲ್ಲಿ ಮುಸ್ಲಿಂ ಯುವಕನಿಗೆ ಬೂಟು ಕಾಲಿನಿಂದ ಒದ್ದು ಬಾಯಿಯಲ್ಲಿ ಬೂಟನ್ನು ಇಟ್ಟ ಹಲವಾರು ಪ್ರಕರಣಗಳು ದಾಖಲಾಗಿವೆ ಇದರಿಂದಲೆಲ್ಲ ಬಚಾವು ಆಗಿದ್ದ ಪಳನಿ ವೇಲು ಈಗ ಗರ್ಡಾಡಿ ಬೊಳಿಯಾರ್ ಫಾರ್ಮ್ಸ್ ವಿಷಯದಲ್ಲಿ ಗೋಪಾಕುಮಾರ್ ನೊಂದಿಗೆ ಸೇರಿ ಹಣ ಮಾಡಲು ಹೋಗಿ ಕುಡಿದ ನಶೆಯಲ್ಲಿ ರಾಜೇಶ್ ಪ್ರಭು ರವರಿಗೆ ಕರೆ ಮಾಡಿ ಜೀವ ಬೆದರಿಕೆ ನೀಡಿ ಕೊನೆಗೆ ತಾನೇ ತೋಡಿದ ಗುಂಡಿಗೆ ಬಿದ್ದಂತಾಗಿದೆ.

ಪಳನಿ ವೇಲು ಕೆಲಸದಲ್ಲಿ ಮುಖ್ಯ ಪೇದೆಯಾಗಿದ್ದರೂ ಕೂಡ ಈತನ ಜೀವನ ಶೈಲಿ ದೊಡ್ಡ ಆಫೀಸರ್ ಗಳಂತೆ ಇದ್ದು ದಿನಕ್ಕೆ ಪ್ಯಾಕೆಟ್ ಗಟ್ಟಲೆ ಸಿಗರೇಟ್ ಗಳು, ಫುಲ್ ಬಾಟಲ್ ಸ್ಕಾಚ್ ವಿಸ್ಕಿ, ಕಾರಿನಲ್ಲಿ ಓಡಾಡಲು ಸಾವಿರಾರು ರೂಪಾಯಿಯ ಪೆಟ್ರೋಲ್ ಒಟ್ಟಾರೆ ತಿಂಗಳಿಗೆ 2 ಲಕ್ಷಕ್ಕೂ ಮೇಲು ತನ್ನ ಈ ಖರ್ಚಿಗೆ ಎಲ್ಲಿಂದ ದುಡ್ಡು ಬರುತ್ತದೆಯೋ ಎಂದು ಸಹೋದ್ಯೋಗಿಗಳು ಹಾಗೂ ಊರಿನವರು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಗೂ ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರ ಸೂಕ್ತ ಕ್ರಮದಿಂದ ಒಬ್ಬ ಭ್ರಷ್ಟ ಪೊಲೀಸ್ ಸಿಬ್ಬಂದಿಯ ದರ್ಪಕ್ಕೆ ಬ್ರೇಕ್ ಬಿದ್ದಿದೆ.

LEAVE A REPLY

Please enter your comment!
Please enter your name here