Home ಕರಾವಳಿ ವಿಟ್ಲ: ಬೀಡಿ ಉದ್ಯಮಿ ಮನೆ ದರೋಡೆ ಪ್ರಕರಣ – ಪೊಲೀಸ್‌ ಅಧಿಕಾರಿ ಸಹಿತ ಇನ್ನೂ ನಾಲ್ವರು...

ವಿಟ್ಲ: ಬೀಡಿ ಉದ್ಯಮಿ ಮನೆ ದರೋಡೆ ಪ್ರಕರಣ – ಪೊಲೀಸ್‌ ಅಧಿಕಾರಿ ಸಹಿತ ಇನ್ನೂ ನಾಲ್ವರು ಸೆರೆ

0

ವಿಟ್ಲ ಸಮೀಪ ಬೋಳಂತೂರಿನ ನಾರ್ಶದ ಬೀಡಿ ಉದ್ಯಮಿ ಸುಲೈಮಾನ್‌ ಹಾಜಿಯವರ ಮನೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಪೊಲೀಸ್‌ ಅಧಿಕಾರಿಯೊಬ್ಬನ ಸಹಿತ ಇನ್ನೂ ನಾಲ್ವರನ್ನು ತನಿಖಾ ತಂಡ ಬಂಧಿಸಿದೆ. ಕೇರಳದ ಕೊಡಂಗಲ್ಲೂರು ಪೊಲೀಸ್‌ ಠಾಣೆಯ ಎಎಸ್‌ಐ ಶಹೀರ್‌ ಬಾಬು ಸೆರೆಯಾಗಿರುವ ಪೊಲೀಸ್‌ ಅಧಿಕಾರಿ. ಈತನ ಸೆರೆಯೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ ಏಳಕ್ಕೇರಿದೆ. ಇಕ್ಬಾಲ್‌ ಪರ್ಲಿಯ ಬಂಟ್ವಾಳ (38), ಸಿರಾಜುದ್ದೀನ್‌ ನಾರ್ಶ (37) ಮತ್ತು ಅಬ್ಸಾರ್‌ ಬಜಾಲ್‌ (27) ಸೆರೆಯಾಗಿರುವ ಇತರ ಆರೋಪಿಗಳು.

ಶಹೀರ್‌ ಬಾಬು ಈ ದರೋಡೆ ಕೃತ್ಯದ ಯೋಜನೆ ರೂಪಿಸಿದವ ಎನ್ನಲಾಗಿದೆ. ದರೋಡೆಗೆ ತಂಡ ರೆಡಿ ಮಾಡಿ ಅವರಿಗೆ ಇ.ಡಿ. ಅಧಿಕಾರಿಗಳಂತೆ ನಟಿಸಲು ತರಬೇತಿ ನೀಡಿದ್ದ. ದರೋಡೆ ನಂತರ ತನ್ನ ಪಾಲಿನ ಹಣ ತೆಗೆದುಕೊಂಡು ಹೋಗಿದ್ದ. ದರೋಡೆ ನಂತರ ಈತ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ. ಈ ನಡುವೆ ದರೋಡೆ ಕೃತ್ಯದ ತನಿಖೆಯ ಪ್ರಗತಿಯನ್ನು ಗಮನಿಸುತ್ತಿದ್ದ. ತನಿಖೆ ಕೇರಳದತ್ತ ತಿರುಗುತ್ತಿದ್ದಂತೆ ಉಳಿದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಐಡಿಯಾಗಳನ್ನು ಹೇಳಿಕೊಟ್ಟಿದ್ದ. ಒಟ್ಟಾರೆ ಇಡೀ ಪ್ರಕರಣದ ಸೂತ್ರಧಾರನಂತೆ ಈ ಪೊಲೀಸ್‌ ಅಧಿಕಾರಿ ವರ್ತಿಸಿದ್ದ.

ಕಳೆದ ಜ.3ರಂದು ರಾತ್ರಿ ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದಿದ್ದ ಆರು ಜನರ ತಂಡ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್‌ ಹಾಜಿಯವರನ್ನು ತಾವು ಇ.ಡಿ. ಅಧಿಕಾರಿಗಳೆಂದು ಬೆದರಿಸಿ ಮನೆಯನ್ನು ಪರಿಶೋಧಿಸಿದ್ದರು. ಇಡೀ ಮನೆಯನ್ನು ಸುಮಾರು ಎರಡೂವರೆ ತಾಸು ಜಾಲಾಡಿ ಮೂಟೆಗಳಲ್ಲಿ ನಗದು ಹಣ ಕಟ್ಟಿಕೊಂಡು ಹೋಗಿದ್ದರು. ಅವರು ಹೋದ ಬಳಿಕವಷ್ಟೇ ಸುಲೈಮಾನ್‌ ಹಾಜಿಯವರಿಗೆ ನಕಲಿ ಇ.ಡಿ. ಅಧಿಕಾರಿಗಳೆಂದು ಅನುಮಾನ ಬಂದಿತ್ತು. ಬಹಳ ಯೋಜನಾಬದ್ಧವಾಗಿ ಮಾಡಿದ್ದ ದರೋಡೆಯ ಸುಳಿವು ಸಿಗಲೇ ಪೊಲೀಸರು ಒಂದು ತಿಂಗಳು ಪರದಾಡಬೇಕಾಗಿತ್ತು.

ಕೇರಳದ ಕೊಟ್ಟಾಯಂನ ಅನಿಲ್‌ ಫೆರ್ನಾಂಡಿಸ್‌, ಸಚಿನ್‌ ಮತ್ತು ಶಬಿನ್‌ ಎನ್ನುವವರನ್ನು ಪೊಲೀಸರು ಈ ಮೊದಲು ಬಂಧಿಸಿದ್ದಾರೆ. ಇದರೊಂದಿಗೆ ದರೋಡೆ ಎಸಗಿದ ತಂಡ ಬಲೆಗೆ ಬಿದ್ದಂತಾಗಿದೆ. ಪ್ರಕರಣದ ಸಂಚಿನಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಅನುಮಾನವಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.

LEAVE A REPLY

Please enter your comment!
Please enter your name here