
ಬೆಳ್ತಂಗಡಿ: ಮಡಂತ್ಯಾರಿನ ಕೊಲ್ಪೆದಬೈಲು ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಕಳೆದೆರಡು ದಿನಗಳ ಹಿಂದೆ ಸಂಚಲನ ಮೂಡಿಸಿದ್ದ ವಿಚಿತ್ರ ಘಟನೆಗಳು ಇದೀಗ ಸಂಪೂರ್ಣ ಬಗೆಹರಿದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.



ವಿಚಿತ್ರ ಘಟನೆಗಳ ನಂತರ ಕುಟುಂಬವು ಮನೆಯನ್ನು ಖಾಲಿ ಮಾಡಿತ್ತು. ಆದಾಗ್ಯೂ, ಅವರು ಶನಿವಾರ ಮಧ್ಯಾಹ್ನ ಮನೆಗೆ ಬಂದು ಸ್ವಲ್ಪ ಸಮಯ ಇದ್ದು ಮತ್ತೆ ಸಂಜೆ ಸಂಬಂಧಿಕರ ಮನೆಗೆ ತೆರಳಿದ್ದರು.


ಈ ಹಿಂದೆ ಬಟ್ಟೆಗಳಿಗೆ ಬೆಂಕಿ ಹತ್ತಿಕೊಳ್ಳುವುದು, ಪಾತ್ರೆಗಳು ಅನಿರೀಕ್ಷಿತವಾಗಿ ಬೀಳುವುದು ಮತ್ತು ಮನೆಯಲ್ಲಿ ಯಾರೋ ಚಲಿಸಿದಂತಾಗುವುದು ಹೀಗೆ ಮುಂತಾದ ವಿಚಿತ್ರ ಘಟನೆಗಳು ನಡೆಯುತ್ತಿರುವುದಾಗಿ ಕುಟುಂಬ ವರದಿ ಮಾಡಿತ್ತು. ಆದರೆ ಈಗ ಅವೆಲ್ಲಾ ತೊಂದರೆಗಳು ನಿವಾರಣೆಯಾಗಿದೆ ಎಂದು ಕುಟುಂಬ ದೃಢಪಡಿಸಿದೆ. ನಮ್ಮ ಮನೆಯ ದೈವದ ಸಮಸ್ಯೆಯಿಂದ ಈ ಸಮಸ್ಯೆಗಳು ಉಂಟಾಗಿದ್ದವು. ಅದಕ್ಕೆ ನಾವು ಫೆಬ್ರವರಿ 8 ರಂದು ಅಗತ್ಯವಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದೇವೆ. ಅನಂತರ ಯಾವುದೇ ತೊಂದರೆಗಳಿಲ್ಲ. ಈಗ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ಹೇಳಿದ್ದಾರೆ.
ಈ ಹಿಂದೆ ಬೀಗ ಹಾಕಿದ ಕಪಾಟಿನಲ್ಲಿಟ್ಟ ಚಿನ್ನ ಕಳೆದುಹೋಗಿದೆ ಎಂದು ಕುಟುಂಬದವರು ಹೇಳಿದ್ದರು. ಆದರೆ ಇದೀಗ ಅದು ಮನೆಯೊಳಗಿನ ದೇವರ ಭಾವಚಿತ್ರದ ಹಿಂದೆ ಪತ್ತೆಯಾಗಿದೆ.
ಭಾನುವಾರ ಭೇಟಿ ನೀಡಬೇಕಿದ್ದ ಹುಲಿಕಲ್ ನಾಗರಾಜು ಅವರಿಗೆ ಬರುವುದು ಬೇಡ ಎಂದು ಕುಟುಂಬವು ತಿಳಿಸಿದೆ. ಆದರೆ ಅವರು ಇನ್ನೂ ಬರುತ್ತಾರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.