![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ಮಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮೂವರು ಅಪರಾಧಿಗಳಿಗೆ 20ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಗಳೂರಿನ ಮೂಳೂರು ಗ್ರಾಮದ ಮೊಹಮ್ಮದ್ ಶಾಕೀರ್ (26) ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಅಬ್ದುಲ್ ಸಮದ್ (32) ಬಂಟ್ವಾಳ ತಾಲೂಕಿನ ಪರ್ಲಿಯಾ ಕೈಕಂಬ ಅಭಿಜಿತ್ (27) ಶಿಕ್ಷೆಗೊಳಗಾದ ಅಪರಾಧಿಗಳು. 2021ರ ಡಿ.7ರಂದು ಪೆರ್ಮನ್ನೂರು ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿಯಿಂದ 16ರ ಅಪ್ರಾಪ್ತೆಯನ್ನು ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಮೊಬೈಲ್ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷ ತೋರಿಸಿ ಅಪಹರಿಸಿದ್ದಾರೆ. ಬಳಿಕ ಕಾಸರಗೋಡಿನ ಮಂಜೇಶ್ವರ ಕೆ.ಜಿ.ಎಂ.ರೋಡ್ ಜಂಕ್ಷನ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೆಟ್ರೋ ಲಾಡ್ಜ್‌ಗೆ ಕರೆದೊಯ್ದು ಬಾಲಕಿಯನ್ನು ಕೊಠಡಿಯಿಂದ ಹೊರಬರಲು ಬಿಡದೆ ಡಿಸೆಂಬರ್ 11ರ ಸಂಜೆವರೆಗೆ ಇಬ್ಬರೂ ಬಾಲಕಿಗೆ ಬಿಯರ್ ಕುಡಿಸಿ, ಸಿಗರೇಟ್‌ಗೆ ಗಾಂಜಾವನ್ನು ಬೆರೆಸಿ ಒತ್ತಾಯದಲ್ಲಿ ಸೇದಿಸಿ ನೊಂದ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಇಬ್ಬರೂ ಅತ್ಯಾಚಾರ ಎಸಗಿದ್ದಾರೆ. ಡಿ.11ರಂದು ಆರೋಪಿಗಳು ಬಾಲಕಿಯನ್ನು ನಾಟೆಕಲ್‌ಗೆ ಕರೆದುಕೊಂಡು ಬಂದು ಅಲ್ಲಿ 3ನೇ ಆರೋಪಿ ಅಭಿಜಿತ್‌ನೊಂದಿಗೆ ಕಳುಹಿಸಿದ್ದಾರೆ. ಆತ ಆ ರಾತ್ರಿ 12 ಗಂಟೆಗೆ ಮಂಗಳೂರು ತಾಲೂಕು ಪಜೀರ್ ಗ್ರಾಮದ ಕಂಬಪದವು ಎಂಬಲ್ಲಿರುವ ಬ್ರೀಝ್ ಅಪಾರ್ಟ್ ಮೆಂಟ್‌ಗೆ ಕರೆದುಕೊಂಡು ಬಂದು ಬಾಲಕಿಗೆ ಒತ್ತಾಯ ಪೂರ್ವಕವಾಗಿ ಬಿಯರ್ ಕುಡಿಸಿ, ಗಾಂಜಾ ಸೇದಿಸಿದ್ದಾನೆ. ಬಳಿಕ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಅಲ್ಲಿಗೆ ಕೂಡಾ ಬಂದ ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಬಿಯರ್ ಕುಡಿದು, ಗಾಂಜಾ ಸೇದಿ, ಬಾಲಕಿಗೆ ಕೂಡಾ ಬಲವಂತವಾಗಿ ಬಿಯರ್ ಕುಡಿಸಿ, ಗಾಂಜಾ ಸೇದಿಸಿ ಆಕೆಯ ಮೇಲೆ ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಒಡ್ಡಿದ್ದಾರೆ. ಬಳಿಕ ಬಾಲಕಿಯ ತಾಯಿ ನೀಡಿರುವ ದೂರಿನಂತೆ ಪೊಲೀಸರು ಆಕೆಯನ್ನು ಅಪಾರ್ಟ್‌ಮೆಂಟ್‌ನಿಂದ ರಕ್ಷಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪೊಲೀಸ್ ನಿರೀಕ್ಷಕ ಸಂದೀಪ್ ಜೆ.ಎಸ್. ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್ ಸಿ -2 ಪೊಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಒಟ್ಟು 15 ಸಾಕ್ಷಿದಾರರನ್ನು ವಿಚಾರಿಸಿ 50ದಾಖಲೆಗಳನ್ನು ಗುರುತಿಸಲಾಗಿರುತ್ತದೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಮತ್ತು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ಬಾಲಕಿಯ ಅತ್ಯಾಚಾರಗೈದ ಸ್ಥಳದಲ್ಲಿ ವಶಪಡಿಸಿಕೊಂಡ ವಸ್ತು ಗಾಂಜಾ ಎನ್ನುವ ಬಗ್ಗೆ ಎಫ್.ಎಸ್.ಎಲ್ ಅಧಿಕಾರಿಗಳು ವರದಿ ನೀಡಿದ್ದರು. ಈ ಪ್ರಕರಣದ ಸಾಕ್ಷ್ಯ ದಾಖಲೆಗಳು, ಪೂರಕ ಸಾಕ್ಷ್ಯವನ್ನು ಹಾಗೂ ವಾದವಿವಾದವನ್ನು ಆಲಿಸಿ ಆರೋಪಿಗಳ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ. ಎಸ್. ಮೂವರು ಅಪರಾಧಿಗಳಿಗೆ ಅತ್ಯಾಚಾರಗೈದ ಅಪರಾಧಕ್ಕೆ 20ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 40,000ರೂ. ದಂಡ ವಿಧಿಸಿರುತ್ತದೆ. ಉಳಿದ ಶಿಕ್ಷೆ ಹಾಗೂ ದಂಡದಲ್ಲಿ ಬಂದ ಒಟ್ಟು ಹಣದಲ್ಲಿ 1,65,000 ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿರುತ್ತದೆ. ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 2,35,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತೀರ್ಪಿನಲ್ಲಿ ನಿರ್ದೇಶಿಸಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಬದರಿನಾಥ ನಾಯರಿ ವಾದ ಮಂಡಿಸಿದ್ದಾರೆ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)