ಮಂಗಳೂರು: ಕಾರ್ಕಳ- ಮೂಡುಬಿದಿರೆ- ಮಂಗಳೂರು ಮಾರ್ಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಮಂಗಳೂರು- ಉಡುಪಿ ನಡುವೆ 10 ಎಲೆಕ್ಟ್ರಿಕ್ ಬಸ್ ಗಳನ್ನು ಪರಿಚಯಿಸಲು ಮುಂದಾಗಿದೆ.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, “ಪ್ರಸ್ತುತ ಈ ಮಾರ್ಗದಲ್ಲಿ ಕೇವಲ ಎರಡು ಕೆಎಸ್‌ಆರ್‌ಟಿಸಿ ಬಸ್ ಗಳು ಮಾತ್ರ ಸಂಚರಿಸುತ್ತಿದ್ದು, ಎರಡರಲ್ಲೂ ಪ್ರಯಾಣಿಕರು ತುಂಬಿದ್ದಾರೆ. ಸಾರ್ವಜನಿಕರು ಹೆಚ್ಚಿನ ಬಸ್‌ಗಳಿಗೆ ಮನವಿ ಮಾಡಿದ್ದಾರೆ. ನಮ್ಮ ವಿಭಾಗಕ್ಕೆ ಒಟ್ಟು 45 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ನಾವು ಈಗ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ.
ಈ ನಿಲ್ದಾಣಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಂಗಳೂರು- ಉಡುಪಿ ಮಾರ್ಗದಲ್ಲಿ ಬಸ್‌ಗಳು ಸಂಚಾರ ಆರಂಭಿಸಲಿವೆ” ಎಂದಿದ್ದಾರೆ. “180ರಿಂದ 200 ಕಿಮೀ ದೂರದ ಎಲೆಕ್ಟ್ರಿಕ್ ಬಸ್‌ಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡೂವರೆ ಗಂಟೆ ಬೇಕಾಗುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬಸ್ ರೀಚಾರ್ಜ್ ಮಾಡುವ ಮೊದಲು ಮೂರು ಟ್ರಿಪ್‌ಗಳನ್ನು ಪೂರ್ಣಗೊಳಿಸುತ್ತದೆ. ಇದರರ್ಥ ಪ್ರತಿ ಬಸ್ ಒಂದು ದಿನದಲ್ಲಿ ಐದರಿಂದ ಆರು ಟ್ರಿಪ್‌ಗಳನ್ನುಓಡಿಸಲು ಸಾಧ್ಯವಾಗುತ್ತದೆ. ಮುಂಜಾನೆಯಿಂದ ತಡರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತೇವೆ. ಭವಿಷ್ಯದಲ್ಲಿ ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಿದರೆ, ಹೆಚ್ಚಿನ ಟ್ರಿಪ್‌ಗಳನ್ನು ಸೇರಿಸಬಹುದು” ಎಂದಿದ್ದಾರೆ.