Home ಕರಾವಳಿ ಪುತ್ತೂರು: ಫ್ಲೆಕ್ಸ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣ- ” ಬಿ” ರಿಪೋರ್ಟ್ ತಿರಸ್ಕರಿಸಿದ ಜಿಲ್ಲಾ...

ಪುತ್ತೂರು: ಫ್ಲೆಕ್ಸ್ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣ- ” ಬಿ” ರಿಪೋರ್ಟ್ ತಿರಸ್ಕರಿಸಿದ ಜಿಲ್ಲಾ ನ್ಯಾಯಾಲಯ

0

ಪುತ್ತೂರು: ಪುತ್ತೂರಿನಲ್ಲಿ ಒಂದು ವರ್ಷದ ಹಿಂದೆ ನಡೆದಿದ್ದ ಬ್ಯಾನ‌ರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಉಡುಪಿಯ ತನಿಖಾಧಿಕಾರಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ ” ಬಿ” ರಿಪೋರ್ಟ್ ನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.


ವರ್ಷದ ಹಿಂದೆ ಪುತ್ತೂರಿನ ಹೃದಯ ಭಾಗದಲ್ಲಿ ಫ್ಲೆಕ್ಸ್ ಅಳವಡಿಸಿ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಯುವಕರ ಮೇಲೆ ನಡೆದಿದ್ದ ಪೊಲೀಸ್ ದೌರ್ಜನ್ಯದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್‌ಸ್ಟೇಬಲ್ ಹರ್ಷಿತ್ ಎಂಬವರ ವಿರುದ್ಧ ಎಫ್ ಐ ಆ‌ರ್ ದಾಖಲಾಗಿತ್ತು. ದೌರ್ಜನ್ಯಕ್ಕೆ ಒಳಗಾಗಿದ್ದ ಪುರುಷರಕಟ್ಟೆಯ ಅವಿನಾಶ್ ಮತ್ತು ಇತರರು ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಘಟನೆಯ ತನಿಖೆಗಾಗಿ ನೇಮಿಸಲಾಗಿತ್ತು.

ತನಿಖೆ ನಡೆಸಿದ ಅವರು “ಈ ದೂರು ಸುಳ್ಳಾಗಿದ್ದು ತನಿಖೆ ನಡೆಸಲು ತಕ್ಕುದಲ್ಲ, ಕಾನೂನಿನ ತಪ್ಪು ತಿಳುವಳಿಕೆಯಂದು, ಕ್ರಮ ಜರಗಿಸತಕ್ಕುದಲ್ಲವೆಂದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವರದಿ ಸ್ವೀಕರಿಸಿರುವ ನ್ಯಾಯಾಲಯ ದೂರುದಾರರಿಗೆ ವರದಿಯೊಂದಿಗೆ ನೋಟೀಸ್ ಜಾರಿ ಮಾಡಿದ್ದು ವರದಿಯನ್ನು ತಿರಸ್ಕರಿಸುವುದಿದ್ದರೆ ನೋಟೀಸ್ ತಲುಪಿದ ಒಂದು ವಾರದೊಳಗಾಗಿ ಸಂಬಂಧಿತ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ವಿರೋಧಿಸಬಹುದು ತಿಳಿಸಿದ್ದು. ಈ ವರದಿಗೆ ಸಂಬಂಧಿಸಿ ದೂರುದಾರ ಅವಿನಾಶ್ ಮತ್ತು ಇತರರ ಪರವಾಗಿ ನಿವೃತ್ತ ಸರಕಾರಿ ಅಭಿಯೋಜಕ ಉದಯಶಂಕರ, ಚಿನ್ಮಯ್ ರೈ ಈಶ್ವರಮಂಗಲ, ಶಿವಾನಂದ ವಿಟ್ಲ ಅವರು ನ್ಯಾಯಾಲಯಕ್ಕೆ ಅಕ್ಷೇಪ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬಿ ರಿಪೋರ್ಟ್ ವರದಿಯನ್ನು ತಿರಸ್ಕರಿಸಿದೆ. ಜೊತೆಗೆ ಆಗ ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್‌ಸ್ಟೇಬಲ್‌ ಹರ್ಷಿತ್ ಎಂಬವರ ವಿರುದ್ಧ ಮಾ.10 ಕ್ಕೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲು ಆದೇಶಿಸಿದೆ.

LEAVE A REPLY

Please enter your comment!
Please enter your name here