ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮಹಿಳಾ ಶೌಚಾಲಯದ ಹಿಂಬದಿಯಿಂದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಇದ್ದಾಗ ಕಿಟಕಿ ಮೂಲಕ ಯಾರೋ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ನಡೆದಿದೆ.
ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಭಾಗದ ಕಿಟಕಿಯ ಗ್ಲಾಸ್ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ. ಈ ಸಂಧರ್ಭ ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಬಸ್ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಶೌಚಾಲಯದ ಭಾಗದ ಅವ್ಯವಸ್ಥೆಯ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ.