Home ಕರಾವಳಿ ಶಾಸಕ ಸಿಟಿ ರವಿ ಮೇಲೆ ಕಾಂಗ್ರೆಸ್‌ ಗೂಂಡಾಗಳ ದಾಳಿಗೆ ಸಂಸದ ಕ್ಯಾ. ಚೌಟ ತೀವ್ರ ಖಂಡನೆ

ಶಾಸಕ ಸಿಟಿ ರವಿ ಮೇಲೆ ಕಾಂಗ್ರೆಸ್‌ ಗೂಂಡಾಗಳ ದಾಳಿಗೆ ಸಂಸದ ಕ್ಯಾ. ಚೌಟ ತೀವ್ರ ಖಂಡನೆ

0

ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆಂಬಲಿಗರು ಅಧಿವೇಶದ ನಡುವೆಯೇ ಮಾರಣಾಂತಿಕ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.


ಸಿಟಿ ರವಿ ಅವರ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ಸದನದ ಸಮಯದಲ್ಲೇ ಗೂಂಡಾಗಿರಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಒಬ್ಬ ಜನಪ್ರತಿನಿಧಿಯ ಮೇಲೆಯೇ ನಿರ್ಭಯವಾಗಿ ಅದರಲ್ಲಿಯೂ ಅತ್ಯಂತ ಗೌರವದ ಸ್ಥಳವಾದ ಸುವರ್ಣ ಸೌಧದ ಮೊಗಸಾಲೆಯಲ್ಲೇ ಕೈ ಮಾಡಲು ಯತ್ನಿಸಿದ ಕಾಂಗ್ರೆಸ್ ಪಾರ್ಟಿ ಪ್ರೇರಿತ ಗೂಂಡಾಗಳು ಜನಸಾಮಾನ್ಯರ ಜೊತೆ ಯಾವ ರೀತಿ ವರ್ತಿಸಬಹುದು ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಈ ರಾಜ್ಯದ ಜನರಿಗೆ ಕಾನೂನಿನ ಮೇಲೆ ನಂಬಿಕೆ ಉಳಿಯಬೇಕೆಂದರೆ ಈ ಘಟನೆಗೆ ಸಂಬಂಧಿಸಿದ ಗೂಂಡಾಗಳನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಬಂಧಿಸುವುದು ಮಾತ್ರವಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಿಟಿ ರವಿ ಅವರನ್ನು ಸದನದೊಳಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕೊಲೆಗಾರ ಎಂಬುದಾಗಿ ಕರೆದಿರುವುದಾಗಿ ಕಾಂಗ್ರೆಸ್‌ ಶಾಸಕರೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸದನದೊಳಗೆ ತಾವು ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಅವಾಚ್ಯ ಪದ ಬಳಸಿಲ್ಲ ಎಂಬುದನ್ನು ಖುದ್ದು ಸಿಟಿ ರವಿ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮೊದಲೇ ಈ ರೀತಿ ಶಾಸಕರೊಬ್ಬರ ಮೇಲೆ ರೌಡಿಸಂ ಪ್ರದರ್ಶಿಸಿರುವುದು ಅತ್ಯಂತ ಖೇದಕರ ಹಾಗೂ ಆತಂಕದ ವಿಚಾರ. ಇದು ಕಾಂಗ್ರೆಸ್‌ನವರ ಗೂಂಡಾಗಿರಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಈ ಘಟನೆ ಬಗ್ಗೆ ಸತ್ಯಾ-ಸತ್ಯತೆಯನ್ನು ಪರಿಶೀಲಿಸದೆ ಪ್ರತಿಭಟನೆ ನಡೆಸುತ್ತಿದ್ದ ಸಿಟಿ ರವಿ ಅವರನ್ನು ಪೊಲೀಸರು ಸುವರ್ಣಸೌಧದ ಒಳಗಿನಿಂದಲೇ ವಶಕ್ಕೆ ಪಡೆದು ಕರೆದೊಯ್ದಿರುವುದು ಯಾವ ನ್ಯಾಯ? ಕಾಂಗ್ರೆಸ್‌ನವರ ಆಡಳಿತದಲ್ಲಿ ಸಿದ್ದರಾಮಯ್ಯನವರ ಸರ್ಕಾರವು ತಮ್ಮ ಮೂಗಿನ ನೇರಕ್ಕೆ ಕಾನೂನು ಹಾಗೂ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಒಬ್ಬ ಜನಪ್ರತಿನಿಧಿಯನ್ನು ಏಕಾಏಕಿ ಅಕ್ರಮವಾಗಿ ಕರೆದುಕೊಂಡು ಹೋಗಿರುವುದನ್ನು ಬಿಜೆಪಿ ಪಕ್ಷ ಒಕ್ಕೊರಳಿನಿಂದ ಖಂಡಿಸುತ್ತದೆ. ಜತೆಗೆ ಕಾಂಗ್ರೆಸ್‌ನವರ ಈ ಗೂಂಡಾ ಆಡಳಿತದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಕ್ಯಾ. ಚೌಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here