ಗೋವಾ ರಾಜ್ಯದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೆನ್ ಪೂರೈಕೆ ಮಾಡುತ್ತಿದ್ದ ನೈಜೇರಿಯಾ ಪ್ರಜೆಯನ್ನು ಸಿಸಿಬಿ ಪೋಲೀಸರು ಬಂಧಿಸಿ 30 ಗ್ರಾಂ ಕೋಕೆನ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೈಕೆಲ್ ಒಕಾಫರ್ ಓಡಿಕ್ಪೋ(44) ಬಂಧಿತ ಆರೋಪಿಯಾಗಿದ್ದು ಪ್ರಸ್ತುತ ಗೋವಾದಲ್ಲಿ ನೆಲೆಸಿದ್ದಾನೆ.
2024 ರ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಉಳ್ಳಾಲದ ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ಅನ್ನು ಮಾರಾಟ ಮಾಡುತ್ತಿದ್ದ ಅಂಬ್ಲಮೊಗರು ಗ್ರಾಮದ ನಿವಾಸಿಗಳಾದ ಸದಕತ್.ಯು @ ಶಾನ್ ನವಾಜ್, ಮಹಮ್ಮದ್ ಅಶ್ಫಕ್ @ ಅಶ್ಫಾ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 34 ಗ್ರಾಂ ಕೋಕೆನ್ ಸಹಿತ ಒಟ್ಟು ರೂ. 2,72,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಆರೋಪಿಗಳಿಂದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿ ಮಂಗಳೂರು ಸಿಸಿಬಿ ಪೊಲೀಸರು ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಯ ಬಳಿಯಿದ್ದ ನಿಷೇದಿತ 30 ಗ್ರಾಂ ಕೋಕೇನ್, ಸಾಗಾಟಕ್ಕೆ ಬಳಸಿದ ಬೊಲೆನೋ ಕಾರು, 2 ಮೊಬೈಲ್ ಫೋನ್, ನಗದು 4500/- ಡಿಜಿಟಲ್ ತೂಕ ಮಾಪನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,25,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನೈಜೇರಿಯಾ ದೇಶದವನಾಗಿರುವ ಆರೋಪಿಯು 2012 ರಲ್ಲಿ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಬಂದು ಗೋವಾದಲ್ಲಿ ಡ್ರಗ್ ಪೆಡ್ಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಈ ಕಾರ್ಯಚರಣೆಯು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.