ಮಂಗಳೂರು: ಸ್ಕೂಟರ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದೊಯ್ದು ಪರಾರಿಯಾಗಿದ್ದ ಸರಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಹಳೆಯಂಗಡಿಯ ಇಂದಿರಾ ನಗರ ನಿವಾಸಿ ಅಬ್ದುಲ್ ರವೂಫ್(30) ಬಂಧಿತ ಆರೋಪಿ. ಡಿಸೆಂಬರ್ 12ರಂದು ಮಧ್ಯಾಹ್ನ 12:40ರ ಸುಮಾರಿಗೆ ಮಂಗಳೂರಿನ ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳರಸ್ತೆಯಲ್ಲಿ ಮಹಿಳೆಯೊಬ್ಬಳರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಅಬ್ದುಲ್ ರವೂಫ್ ವಿಳಾಸ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದೊಯ್ದು ಪರಾರಿಯಾಗಿದ್ದಾನೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ವಿಶೇಷ ತಂಡ ರಚಿಸಿದ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್.ರವರು ಆರೋಪಿತ ಅಬ್ದುಲ್ ರವೂಫ್ ಬಂಧಿಸಿದ್ದಾರೆ.
ಆರೋಪಿತನಿಂದ 70,000ರೂ. ಮೌಲ್ಯದ ಚಿನ್ನದ ಸರ, 50,000ರೂ. ಮೌಲ್ಯದ ಸ್ಕೂಟರ್, 50,000ರೂ. ಮೌಲ್ಯದ ಆಟೋರಿಕ್ಷಾ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಆರೋಪಿಯ ವಿರುದ್ಧ ಮೂಡುಬಿದಿರೆ ಠಾಣೆ, ಮುಲ್ಕಿ ಠಾಣೆ, ಬಜಪೆ ಠಾಣೆ, ಉಪ್ಪಿನಂಗಡಿ ಠಾಣೆ ಮತ್ತು ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣಗಳಲ್ಲಿ ಆರೋಪಿ ಎರಡು ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದ.