ಉಳ್ಳಾಲ : ಸಹೋದರಿಯ ಪತಿಯ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದ ಮಹಿಳೆಯೊಬ್ಬರು ಸಮುದ್ರಪಾಲಾಗಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಸೋಮವಾರ ಸಂಭವಿಸಿದೆ. ದೇರೆಬೈಲ್‌ನ ದಿ.ಜಗದೀಶ್ ಭಂಡಾರಿಯವರ ಪತ್ನಿ ಉಷಾ (72)ಮೃತಪಟ್ಟ ಮಹಿಳೆ. ಉಷಾ ಅವರ ತಂಗಿ ನಿಶಾ ಭಂಡಾರಿಯವರ ಪತಿ ಮೃತಪಟ್ಟಿದ್ದು, ಸೋಮವಾರ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಸಂಬಂಧಿಕರೊಂದಿಗೆ ಸೋಮೇಶ್ವರ ಸಮುದ್ರ ತೀರಕ್ಕೆ ಆಗಮಿಸಿದ್ದರು.
ಪಿಂಡಪ್ರದಾನದ ಬಳಿಕ ಸಮುದ್ರದಲ್ಲಿ ಸ್ನಾನ ಮುಗಿಸುತ್ತಿದ್ದಾಗ ಸಂಬಂಧಿಕರು ನೋಡುತ್ತಿದ್ದಂತೆಯೇ ಅವರು ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿದ್ದು ಉಷಾರನ್ನು ದಡಕ್ಕೆ ತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಉಷಾ ಅವರು ಎನ್ಎಂಪಿಟಿಯಲ್ಲಿ 40ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ನಿವೃತ್ತರಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.