ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಎಸ್ಎಂ ಕೃಷ್ಣ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ ಬ್ರಿಜೇಶ್ ಚೌಟ ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಮಹಾನ್ ನಾಯಕನನ್ನು ಕಳೆದುಕೊಂಡಿದೆ. ನಾಡು ಕಂಡ ಶ್ರೇಷ್ಠ ಅನುಭವಿ ರಾಜಕಾರಣಿಯಾಗಿದ್ದ ದೂರದೃಷ್ಟಿಯ ಆಡಳಿತಕ್ಕೆ ಮಾದರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಬೆಂಗಳೂರು ನಗರಕ್ಕೆ ಐಟಿ-ಬಿಟಿಯ ಗರಿಮೆಯನ್ನು ಮೂಡಿಸುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮೇರು ವ್ಯಕ್ತಿತ್ವದ ರಾಜಕೀಯ ಧುರೀಣ ಎಸ್.ಎಂ. ಕೃಷ್ಣ ಅವರ ನಿಧನವು ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ಕ್ಯಾ. ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎಸ್.ಎಂ. ಕೃಷ್ಣ ಅವರು ರಾಜಕೀಯವಾಗಿ ನಡೆದು ಬಂದಿದ್ದ ಹಾದಿ, ಅವರ ಆಡಳಿತ ಕಾರ್ಯ ವೈಖರಿಗಳು, ರಾಜಕೀಯ ಅನುಭವ, ದೂರದೃಷ್ಟಿಯ ಚಿಂತನೆಗಳು, ಅವರ ವ್ಯಕ್ತಿತ್ವ-ವರ್ಚಸ್ಸು ನಿಜಕ್ಕೂ ಸ್ಪೂರ್ತಿದಾಯಕ ಹಾಗೂ ಅನುಕರಣೀಯ. ಆ ಮೂಲಕ, ಒಬ್ಬ ಅಪ್ಪಟ ರಾಜಕೀಯ ಮುತ್ಸದ್ದಿಯನ್ನು ಕರುನಾಡು ಹಾಗೂ ದೇಶ ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದು ಕ್ಯಾ. ಚೌಟ ಅವರು ಕಂಬನಿ ಮಿಡಿದಿದ್ದಾರೆ.
“ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರು, ಸ್ನೇಹಿತರು, ಒಡನಾಡಿಗಳು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ನೀಡಲಿ. ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂಸದರು ಸಂತಾಪ ಸೂಚಿಸಿದ್ದಾರೆ.