ಮಂಗಳೂರು: ಹಲ್ಲೆಗೆ ಪ್ರತೀಕಾರಕ್ಕೆ ನಡೆದ ತಲವಾರ ದಾಳಿ ನಡೆಸಿದ್ದರೆನ್ನಲಾದ ಪ್ರಕರಣದಲ್ಲಿ ಬಜರಂಗದಳದ ಸಂಯೋಜಕ ಅರ್ಜುನ್ ಮಾಡೂರುನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರಂದು ರಾತ್ರಿ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ನಡುವೆ ನಡೆದಿದ್ದ ಸಣ್ಣ ಅಪಘಾತ ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಶರತ್ ಸ್ನೇಹಿತ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಇನ್‌ಸ್ಪೆಕ್ಟರ್ ಕೊಠಡಿಯೊಳಗೆ ಕಾರು ಚಾಲಕರಾದ ಶರತ್, ಖಲೀಲ್‌ರೊಂದಿ ಸಂಧಾನ ನಡೆಸುತ್ತಿದ್ದ ವೇಳೆ ಖಲೀಲ್ ಸಹೋದರ ಹೊಸಂಗಡಿ ಕಡಂಬಾರು ನಿವಾಸಿ ಮಹಮ್ಮದ್ ಆಸಿಫ್ ಎಂಬಾತ ಅರ್ಜುನ್ ಮಾಡೂರಿಗೆ ಏಕಾಏಕಿ ಹಲ್ಲೆ ನಡೆಸಿದ್ದ.
ಅರ್ಜುನ್ ಮಾಡೂರು ಹಲ್ಲೆಗೈದಿದ್ದ ಆರೋಪಿ ಮಹಮ್ಮದ್ ಆಸಿಫ್ ಜಾಮೀನಿನಲ್ಲಿ ಜೈಲಿನಿಂದ ಹೊರಬರುತ್ತಲೇ ಪ್ರತೀಕಾರ ತೀರಿಸಲು ಆತನ ಮೇಲೆ ತಲವಾರು ದಾಳಿಗೆ ಯತ್ನಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅರ್ಜುನ್ ಮಾಡೂರುನನ್ನು ಉಳ್ಳಾಲ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.